Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Sunday 12 July 2020

ಸಿನಿಮಾ ಜಗತ್ತು 2


ಮಕ್ಕಳ ಚಲನಚಿತ್ರಗಳು ಬಾಲ್ಯದ ಆಸೆಗಳನ್ನು, ನಿರಾಶೆಯನ್ನು ಸಾಹಸವನ್ನು ನೆನಪಿಸುವ ಚಿತ್ರಗಳಾಗಿರುತ್ತವೆ. ನಾವೆಲ್ಲಾ ಚಿನ್ನಾರಿಮುತ್ತ, ಪುಟಾಣಿ ಏಜೆಂಟ್, ಬೆಟ್ಟದಹೂವು, ಇದನ್ನೆಲ್ಲಾ ನೋಡಿಯೇ ಬೆಳೆದವು ನಾವು ಅಂತ ಅದ್ಭುತವಾದ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ ಎನ್ನುವ ಬೇಸರವಿದೆ. ಇಲ್ಲಿ ನಾನು ಹೇಳಿರುವ ಚಿತ್ರಗಳು ಜಗತ್ತಿನ ನಾನಾ ದೇಶಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗಿ ಪ್ರಶಸ್ತಿಗಳನ್ನು ಬಾಚಿಕೊಂಡವು, ಹಾಗೆ ನೋಡುಗರ ಮನಸನ್ನು ಸಹ.

 

children of heaven (Persian)

-----------------------

ಚಿತ್ರದ ಆರಂಭದಲ್ಲಿಯೇ ತಂಗಿಯ ಶಾಲೆಯ ಶೂವನ್ನು ಹೋಲಿಸಿಕೊಂಡು ಹೋಗುವ ಅಣ್ಣ ಅದನ್ನು ಯಾಮಾರಿ ತರಕಾರಿ ತರಲು ಬರುವ ಜಾಗದಲ್ಲಿ ಕಳೆದುಕೊಳ್ಳುತ್ತಾನೆ. ಇರೋದು ಅದೊಂದೇ ಜೊತೆ ಶೂಗಳು, ಅದಿಲ್ಲದಿದ್ದರೆ ಆಕೆ ಶಾಲೆಗೇ ಹೋಗಲು ಸಾಧ್ಯವಿಲ್ಲ, ಎಲ್ಲಿ ಹುಡುಕಿದರೂ ಅದು ಸಿಗದಿದ್ದಾಗ ತಂಗಿಯ ಮುಂದೆ ಬಂದು ನಿಲ್ಲುತ್ತಾನೆ. ಎಲ್ಲಿ ನನ್ನ ಶೂಗಳು ಎನ್ನುವಾಗ, ಅದನ್ನು ಕಳೆದುಕೊಂಡ ವಿಷಯ ತಿಳಿಸುತ್ತಾನೆ. ಈಗ ನಾನು ಹೇಗೆ ಶಾಲೆಗೇ ಹೋಗಲಿ ಎಂದು ಅಳುವ ತಂಗಿಗೆ ನಾನು ಏನಾದರೂ ಒಂದು ದಾರಿ ಹುಡುಕುತ್ತೇನೆ ಯಾವುದೇ ಕಾರಣಕ್ಕೂ ಇದನ್ನು ಮನೆಯಲ್ಲಿ ಹೇಳಬೇಡ ಹೇಳಿದರೆ ಅವರು ಹೊಸದು ಕೊಡಿಸುವ ಹಂತದಲ್ಲೂ ಇಲ್ಲ ಜೊತೆಗೆ ನನಗೂ ಸರಿಯಾಗಿ ಬೀಳುತ್ತೆ ಏಟು ಹಾಗಾಗಿ ನಿನಲ್ಲೇ ಇರಲಿ ನೀನು ಶಾಲೆಗೇ ಹೋಗುವ ಹಾಗೆ ನೋಡಿಕೊಳ್ಳುವುದು ನನ್ನ ಮೇಲೆ ಇರಲಿ ಎಂದು ಕೇಳಿಕೊಳ್ಳುತ್ತಾನೆ. ಪುಟ್ಟ ತಂಗಿಗೆ ಮನೆಯಲ್ಲಿನ ವಿಷಯ ಗೊತ್ತು ಹಾಗಾಗಿ ಅದನ್ನು ಹಾಗೆ ಮನಸಿನಲ್ಲಿಯೇ ಇಟ್ಟುಕೊಂಡು ಸುಮ್ಮನಾಗುತ್ತಾಳೆ. ಮಾರನೆಯ ದಿನ ತಗೋ ನನ್ನ ಶೂ ಧರಿಸಿ ನೀ ಶಾಲೆಗೆ ಹೋಗು ಎಂದು ನೀಡುವ ಅಣ್ಣನಿಗೆ. ಹಾಗಿದ್ರೆ ನೀನು ಹೇಗೆ ಶಾಲೆಗೆ ಹೋಗ್ತೀಯಾ? ಎನ್ನುವಾಗ ನೀನು ಶಾಲೆಗೆ ಹೋಗಿ ಮೊದಲ ಪಿರಿಯಡ್ ಮುಗಿಸಿಕೊಂಡು ಹೊರ ಬಂದು ನನಗೆ ಕೊಡು ನಾನು ಅದನ್ನು ಧರಿಸಿಕೊಂಡು ಶಾಲೆಗೆ ಹೋಗುತ್ತೇನೆ ಲೇಟ್ ಆದರೂ ಹೇಗೆ ನಿಭಾಯಿಸೋಣ ಎನ್ನುತ್ತಾನೆ. ಅವರ ಬದುಕು ಹೀಗೆ ಸಾಗುತ್ತೆ. ಇದರ ನಡುವೆ ನಡೆಯುವ ನಾನಾ ಘಟನೆಗಳನ್ನು ಅದೆಷ್ಟು ನೈಜತೆಯಿಂದ ಹೆಣೆದಿದ್ದಾರೆ ಎಂದರೆ ನಾವೂ ಅವರ ಮನೆಯಲ್ಲಿ ಇದ್ದೆವೇನೋ ಎನ್ನಿಸುತ್ತೆ. ಇರಾನಿಯನ್ ಫಿಲಂಸ್ ನೋಡುವವರಿಗೆ Majid Majidi ನ ಪರಿಚಯ ಇರುತ್ತದೆ ನಮ್ಮಲ್ಲಿ ಕಲಾತ್ಮಕ ಚಿತ್ರಗಳಲ್ಲಿ ಮಿಂಚುವ ಶೇಷಾದ್ರಿ, ಗಿರೀಶ್ ಕಾಸರವಳ್ಳಿಯಾ ಹಾಗೆ ಅವರು. ಸಬ್ ಟೈಟಲ್ ಇಂಗ್ಲಿಷ್ ನಲ್ಲಿ ಇದೆ. ನಾನು ಹೇಳಿದ ಕಥೆಯನ್ನು ಕೇಳಿದ ಮೇಲೆ ನೋಡುವಾಗ ಭಾಷೆಯೇ ಬೇಕಿಲ್ಲ ಹಾಗೆಯೆ ಅರ್ಥವಾಗುತ್ತೆ ಆ ಕಷ್ಟಗಳನ್ನು ನಿರಾಶೆಯನ್ನು ನಾವೂ ಸಹ ಅನುಭವಿಸಿಯೇ ಬೆಳದಿರುತ್ತೇವೆ.

CliK FOR LiNK 

Colour of paradise (Persian)

-----------

Majid Majidiನ ನಿರ್ದೇಶನದಲ್ಲಿ ನನಗೂ ತುಂಬಾ ಇಷ್ಟವಾದ ಚಿತ್ರವಿದು. ಹುಟ್ಟುತ್ತಲೇ ದೃಷ್ಟಿಯಿಲ್ಲದ ನಾಯಕ. ತನ್ನ ಅಂಧರು ಓದುವ ಶಾಲೆಯಲ್ಲಿ ಪರೀಕ್ಷೆ ಮುಗಿಸಿ ಬೇಸಿಗೆ ರಜೆಗೆ ಹೆತ್ತವರು ಬಂದು ಕರೆದುಕೊಂಡು ಹೋಗುತ್ತಾರೆ ಎಂದು ಕಾಯುತ್ತಿರುತ್ತಾನೆ. ತನ್ನೊಂದಿಗೆ ಓದಿದ ಎಲ್ಲ ಹುಡುಗರ ಹೆತ್ತವರೂ ಸಹ ಬಂದು ಕರೆದುಕೊಂಡು ಹೋಗಿಯಾಯಿತು. ತನ್ನವರಿನ್ನೂ ಬಂದಿಲ್ಲಾ ಎನ್ನುತ್ತಾ ಕಾಯುತ್ತಾ ಇರುವ ಹುಡುಗನ ತಂದೆ ಅಲ್ಲಿಗೆ ಬರುತ್ತಾರೆ. ದೂರದಿಂದಲೇ ಆತನನ್ನು ನೋಡಿದವರು. ಸೀದಾ ಶಾಲೆಯ ನಿರ್ವಾಹಕರನ್ನು ಭೇಟಿ ಮಾಡಿ. ಸರ್ ನನ್ನ ಮಗನನ್ನು ಇಲ್ಲಿಯೇ ಉಳಿಸಿಕೊಳ್ಳಲು ಸಾಧ್ಯವೇ? ಅವನು ಹುಟ್ಟಿದ ಮೇಲೆ ಅವರಮ್ಮ ತೀರಿಕೊಂಡರು, ನಾನು ಕೆಲಸಕ್ಕೆ ಹೋಗಬೇಕು ನೋಡಿಕೊಳ್ಳುವುದು ಕಷ್ಟವಾಗುತ್ತೆ ಹಾಗಾಗಿ ಎಂದು ಕೇಳಿಕೊಳ್ಳುತ್ತಾರೆ. ನೋಡ್ರಿ ಇದು ಶಾಲೆ ಹಾಸ್ಟೆಲ್ ಅಲ್ಲಾ. ಇಷ್ಟು ದಿನ ಇಲ್ಲೇ ಇಟ್ಕೊಂಡು ವಿದ್ಯಾಬ್ಯಾಸ ಕಳುಹಿಸಿದ್ದೇವೆ ಏನೋ ಒಂದೆರೆಡು ತಿಂಗಳು ಮಕ್ಕಳು ಅವರ ಹೆತ್ತವರೊಂದಿಗೆ ಇರಲಿ ಎಂದು ಬಯಸಿದರೆ ನೀವೆನ್ರೀ ಯಾವಾಗ ಬಂದರೂ ಇದೆ ಹಾಡ್ತಾ ಇರ್ತೀರಲ್ಲ ಸುಮ್ನೆ ಕರ್ಕೊಂಡು ಹೋಗ್ರೀ ಎನ್ನುವವರಿಗೆ ಏನೂ ಹೇಳಲು ಆಗದೆ ಮತ್ತೆ ಮಗನ ಹತ್ತಿರಕ್ಕೆ ಬರುತ್ತಾರೆ. ಅವರ ಕೈಯನ್ನು ಹಿಡಿದುಕೊಂಡ ನಾಯಕ ಅಪ್ಪ ನಾನ್ ಎಲ್ಲೋ ನೀವು ಬರೋದೆ ಇಲ್ಲಾ ಎಂದುಕೊಂಡೆ ಎನ್ನುವಾಗ ಇಬ್ಬರ ಕಣ್ಣುಗಳು ಜಿನುಗುತ್ತೆ. ಮಗನನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಾರೆ. ತಾನು ಇನ್ನೊಂದು ಮದುವೆಯಾಗಬೇಕು ಅದಕ್ಕೆ ಈ ಮಗನೆ ಅಡ್ಡಿಯಾಗಿದ್ದಾನಲ್ಲ ಎನ್ನುವ ಬೇಸರ ತಂದೆಗೆ. ಒಲ್ಲದ ಮನಸಿನಲ್ಲಿಯೇ ಮಗನನ್ನು ಕರೆದುಕೊಂಡು ಹೋಗುತ್ತಾರೆ. ಮೊಮ್ಮಗನ ನೋಡಿದ ಕೂಡಲೇ ಬಹಳ ಸಂತೋಷ ಪಡುವ ಅಜ್ಜಿ. ಕಥೆ ಈಗ ಅಜ್ಜಿ ಅಪ್ಪ ಮಗ ಈ ಮೂವರೊಂದಿಗೆ ಪಯಣಿಸುತ್ತೆ. ಸದ್ದು ಇಲ್ಲದೆ ಅದೆಷ್ಟೋ ಭಾವನೆಗಳನ್ನು ಮೌನದಿಂದ ತಿಳಿಸುವ ಚಿತ್ರವಿದು. ಕೆಲವೊಂದು ಕಡೆ ಆ ಮಗು ತನ್ನ ತಂದೆಯಿಂದಲೇ ನಿರಾಕರಿಸಲ್ಪಡುವಾಗ ಭಾವನೆಗಳನ್ನು ಕೆದಕುತ್ತೆ. ಸುಂದರ ಹಿನ್ನಲೆ ಸಹಜ ನಟನೆ, ಚಿತ್ರದ ಕ್ಲೈಮಾಕ್ಸ್ ದೃಶ್ಯ ನೆನಪಲ್ಲಿ ಉಳಿಸುತ್ತೆ ...

CliK FOR LiNK  

Capernaum (Arabic)

----------------------

12ವರ್ಷದ ಬಾಲಕನನ್ನು ಕೋರ್ಟ್’ಗೆ ಕರೆದು ತರುತ್ತಾರೆ. ಆತ ದೂರು ನೀಡಿರುವುದು ತನ್ನ ಹೆತ್ತವರ ಮೇಲೆಯೇ.

ಜಡ್ಜ್ ಯಾಕಪ್ಪ ನಿನ್ನ ಹೆತ್ತವರ ಮೇಲೆಯೇ ದೂರು ನೀಡಿದ್ದೀಯಾ? ಅಂಥದ್ದು ಅವರು ಮಾಡಿದ ತಪ್ಪಾದರೂ ಏನು ಎನ್ನುವಾಗ. ಆತನ ಉತ್ತರ, ನನ್ನನ್ನು ಹುಟ್ಟಿಸಿದ್ದು ಎನ್ನುತ್ತಾನೆ. ಇರುವ ಆಸ್ತಿಗಾಗಿ ಮಗುವನ್ನು ಹಡೆಯದೆ, ಅವಶ್ಯಕತೆಗೂ ಮೀರಿ ಮಕ್ಕಳನ್ನು ಹಡೆದು. ಅವರಿಗೆ ಸರಿಯಾದ ಆಹಾರ, ಇರುವ ಸೂಕ್ತಸ್ಥಳ, ವಿದ್ಯಾಬ್ಯಾಸ ಇಲ್ಲದೆ ಬೇಕಾಬಿಟ್ಟಿ ಸಾಕುವ ಹೆತ್ತವರನ್ನು ಪ್ರಶ್ನಿಸುವ ಹಾಗಿದೆ ಈ ಚಿತ್ರ. ಬಲವಂತವಾಗಿ ತನ್ನ ಹದಿನಾಲಕ್ಕು ವರ್ಷದ ತಂಗಿಗೆ, 30ವರ್ಷದವನಿಗೆ ಮದುವೆ ಮಾಡಿಸುವ ಹೆತ್ತವರನ್ನು ಕಂಡು ಬೇಸರಗೊಂಡು ಇವರೊಂದಿಗೆ ಇನ್ನು ಇರಬಾರದು ಎಂದು ಮನೆಬಿಟ್ಟು ಹೊರಡುತ್ತಾನೆ. ಹೀಗೆ ಹೋದ ಅವನಿಗೆ ಎದುರಾಗುವ ವಿಷಯಗಳೇ ಚಿತ್ರದ ಮೂಲ. Lebanon ದೇಶದ ನೈಜ ಚಿತ್ರವನ್ನು ಈ ಚಿತ್ರ ಸಾರಿದೆ ಅಲ್ಲಿನ ಬದುಕು ಬವಣೆ. ಹೋಟೆಲ್ ನಲ್ಲಿ ಕೆಲಸ ಕೇಳುತ್ತಾನೆ. ಅಲ್ಲಿ ಅದಾಗಲೇ ಕೆಲಸ ಮಾಡುತ್ತಾ ಇರುವ ಹುಡುಗಿ ತನ್ನ ಮನೆಯಲ್ಲಿ ಇರುವ ಮಗುವನ್ನು ನೋಡಿಕೊಳ್ಳಲು ಆತನನ್ನು ಕರೆದುಕೊಂಡು ಹೋಗುತ್ತಾರೆ ಆಕೆ ಬೇರೆ ದೇಶದಿಂದ ಬಂದು ಅಲ್ಲಿ ನೆಲಸಿರುವುದು. ಅಲ್ಲಿ ಹುಟ್ಟುವ ಪ್ರತಿಯೊಂದು ಮಗುವಿಗೂ ಸಹ ನೊಂದಾಣಿಕೆ ಕಡ್ಡಾಯ ಆದರೆ ಆಕೆಯಲ್ಲಿ ಯಾವುದೇ ದಾಖಲೆ ಇಲ್ಲ ಹಾಗಾಗಿ ಯಾರಿಗೂ ತಿಳಿಯದಂತೆ ತನ್ನ ಪುಟ್ಟಮಗುವನ್ನು ಸಾಕುತ್ತಿರುತ್ತಾಳೆ. ಆ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ನಾಯಕ ಹೆಗಲಿಗೆ ಬೀಳುತ್ತೆ. ಆತನಿಗೆ ಅದೇನು ಹೊಸದಲ್ಲ ತನ್ನ ತಂಗಿಯರಿಗೆ ತಮ್ಮಂದಿರಿಗೆ ತಾಯಿಯಂತೆ ಇದ್ದವನು ಆತ. ಹತ್ತಾರು ಕೆಲಸ ಮಾಡಿ ಮನೆಗೆ ನೆರವಾದವನು. ತನ್ನೊಂದಿಗೆ ಜೂಸು ಮಾರಲು ಬರುವ ತಂಗಿ ಮೈನೆರೆದು ಅಂಗಿಯಲ್ಲಿ ರಕ್ತವಾದಾಗ ಅವಳನ್ನು ಪಬ್ಲಿಕ್ ಟಾಯ್ಲೆಟ್ಗೆ ಕರೆದುಕೊಂಡು ಹೋಗಿ ರಕ್ತವಾದ ಬಟ್ಟೆಯನ್ನು ಒಗೆದು, ಮುಂದೆ ಹೀಗೆ ಆದಾಗ ರಕ್ತವನ್ನು ಕಾಣದ ಹಾಗೆ ಹೇಗೆ ನಿಭಾಯಿಸಬೇಕು ಎಂದು ತಿಳಿಸುತ್ತಾನೆ ಅದೊಂದು ದೃಶ್ಯ ಆತನಿಗೆ ಇರುವ ಅಕ್ಕರೆ, ಆತನ ಹೆತ್ತವರಿಗೆ ಇರುವ ನಿರ್ಲಕ್ಷವನ್ನು ತೋರಿಸುತ್ತದೆ. ಸಂಪೂರ್ಣ ಚಿತ್ರವೂ ಸಹ ಒಂದು ಬೆಸ್ಟ್ ಫೀಲ್ ಕೊಡುತ್ತದೆ. ಚಿತ್ರದ ನಾಯಕನಾಗಿ ಅಷ್ಟೊಂದು ಕಷ್ಟಗಳನ್ನು ಅದು ಹೇಗೆ ಇಷ್ಟೊಂದು ನಾಜೂಕಾಗಿ ನಿಭಾಯಿಸುತ್ತಾನೆ ಆತನ ಮುಖದಲ್ಲಿ ಭಯದ ಭಾವನೆಯೇ ಇಲ್ಲದೆ ಎಂದು ನಮ್ಮೊಳಗೇ ಯೋಚನೆ ಹುಟ್ಟುವಾಗಲೇ ಅಲ್ಲೊಂದು ಸತ್ಯ ತಿಳಿಯುತ್ತೆ ಚಿತ್ರದ ನಾಯಕೆ ಸಿರಿಯಾ ದೇಶದಲ್ಲಿ ನಿರಾಶ್ರಿತ. ಕಷ್ಟಗಳನ್ನು ಕಣ್ಣ ಎದುರೆ ನಿತ್ಯವೂ ಕಾಣುವವನಿಗೆ ಇದೆಲ್ಲಾ  ಏನೂ ಅಲ್ಲ ಅನ್ನಿಸುತ್ತೆ...


boy with striped pyjamas (English)

--------------

ಎರಡನೆಯ ವಿಶ್ವಯುದ್ಧದ ಕಾಲ ಘಟ್ಟ. ನಾಯಕನ ತಂದೆ ಹಿಟ್ಲರ್ ಸೇನೆಯಲ್ಲಿ ದೊಡ್ಡ ಕೆಲಸದಲ್ಲಿರುವಾತ. ಕೆಲಸದ ಊರಾಚೆ ಇರುವ ಪ್ರದೇಶಕ್ಕೆ ವರ್ಗಾವಣೆಯಾಗುತ್ತದೆ. ನಾಯಕ ಸಿಟಿಯಲ್ಲಿ ಶಾಲೆಯಲ್ಲಿ ಹತ್ತಾರು ಸ್ನೇಹಿತರ ಜೊತೆಗೆ ಓದಿದವನು. ಶಾಲೆಯನ್ನು ಅರ್ಧದಲ್ಲೇ ನಿಲ್ಲಿಸಿ ತಂದೆಯೊಂದಿಗೆ ಹೋರಾಡಬೇಕು. ಇರುವ ಮನೆಯ ಜೊತೆಗೆ ಸ್ನೇಹಿತರನ್ನು ಬಿಟ್ಟು ಹೋಗುವ ನೋವು. ಆದರೂ ಹೋಗಲೇ ಬೇಕು. ಊರಾಚೆ ಬಂದರೆ. ಅಲ್ಲೋ ಸುತ್ತಲೂ ಬರೀ ವನದಂತಿದೆ. ಹೇಳಿಕೊಳ್ಳಲು ಸೈನ್ಯದ ಜನರನ್ನು ಬಿಟ್ಟರೆ ಬೇರೆಯಾರೂ ಇಲ್ಲಾ.. ತನ್ನ ವಯಸಿನ ಒಬ್ಬರೂ ಇಲ್ಲದ ಬೇಸರ. ಶಾಲೆಯೂ ಇಲ್ಲಾ ಮನೆಗೆ ಮೇಸ್ಟ್ರು ಬಂದು ಪಾಠ ಮಾಡುತ್ತಾರೆ ಅವನಿಗೆ ಅದರಲ್ಲಿ ಆಸಕ್ತಿ ಇಲ್ಲಾ. ಎಲ್ಲವನ್ನೂ ಕೆದಕಿ ನೋಡುವ ವಯಸ್ಸು. ಹೀಗಿರುವಾಗ ಮನೆಯ ಹಿತ್ತಲಿನ ಆಚೆ ಫಾರ್ಮ್ ಇದೆ ಅಲ್ಲಿ ಕೆಲಸಗಾರರು ಇದ್ದಾರೆ ರೈತರು ಅವರ ಮಕ್ಕಳೂ ಇದ್ದಾರೆ ಅನ್ನಿಸುತ್ತೆ ಆತನಿಗೆ. ಯಾರಿಗೂ ಹೇಳದೆ ಹಿತ್ತಲಿನ ಹಿಂದೆ ಹೊರಡುತ್ತಾನೆ ತುಸು ದೂರ ಹೋದ ಮೇಲೆ ನೋಡಿದರೆ ಬೇಲಿ ಹಾಕಿದ ಜಾಗ ಅಲ್ಲೊಬ್ಬ ಹುಡುಗ ಕೈಧಿಗಳು ಧರಿಸುವ ಉಡುಪನ್ನು ಧರಿಸಿ ಕೆಲಸ ಮಾಡುತ್ತಾ ಇದ್ದಾನೆ ತನ್ನದೇ ವಯಸಿನವ. ಅವನನ್ನು ಮಾತಿಗೆಳೆಯುತ್ತಾನೆ. ಮೊದಲಿಗೆ ಆ ಹುಡುಗನಿಗೆ ಚಂದವಾಗಿ ನೀಟಾಗಿ ಅಂಗಿ ತೊಟ್ಟ ಇವನೊಂದಿಗೆ ಮಾತಾಡಲು ಭಯ ಹೇಗೋ ಮಾತಾಡಿಸುತ್ತಾನೆ. ನೀವೆಲ್ಲಾ ಯಾಕೆ ಒಂದೇ ರೀತಿಯ ಉಡುಪು ತೊಟ್ಟಿದ್ದೀರಾ? ಏನಾದರೂ ಆಟ ಆಡ್ತಾ ಇದ್ದೀರಾ? ನಾನು ಸೇರಬಹುದ? ಎನ್ನುವವನಿಗೆ ಅದೇನೋ ನನಗೆ ಗೊತ್ತಿಲ್ಲಾ ನನಗೆ ನನ್ನ ತಂದೆಗೆ ಇದೆ ರೀತಿಯ ಬಟ್ಟೆ ಕೊಟ್ಟಿದ್ದಾರೆ ದಿನ ಬೆಳಗ್ಗೆಯಿಂದ ಕೆಲಸ ಮಾಡಬೇಕು ಈ ನಂಬರ್ ಇಟ್ಟು ಕೂಗುತ್ತಾರೆ ಹೋಗಬೇಕು ಊಟ ಕೊಡುತ್ತಾರೆ ಎನ್ನುತ್ತಾನೆ. ಇದೆಲ್ಲಾ ಯಾಕ್ ಮಾಡ್ತಾ ಇರೋದು ಯಾರ್ ಮಾಡ್ತಾ ಇರೋದು ಎನ್ನುವ ನಾಯಕನ ಪ್ರಶ್ನೆಗೆ ಅದೇನೋ ನನಗೆ ಗೊತ್ತಿಲ್ಲಪ್ಪ ಎನ್ನುವಾಗ ಅವನನ್ನು ಕೂಗುವ ಸದ್ದಾಗಿ ಅಲ್ಲಿಂದ ಸರಿ ನಾನು ಹೊರಡುತ್ತೇನೆ ಎಂದು ಹೋಗುವ ಹುಡುಗನಿಗೆ. ಹೇಯ್ ನಾಳೆ ಬರ್ತೀಯಾ ನಾನು ಬರ್ತೀನಿ ಆಟ ಆಡೋಣ ಎಂದು ಕೇಳುವ ನಾಯಕನ ಪ್ರಶ್ನೆಗೆ ಹೇಳಕ್ಕೆ ಆಗಲ್ಲ ನೋಡ್ತೀನಿ ಎಂದು ಹೊರಡುತ್ತಾನೆ. ಹೀಗೆ ಅವರ ಸ್ನೇಹ ಬೇಲಿಯ ಆಚೆಗೂ ಬೆಳೆಯುತ್ತೆ ನಡುವೆ ಇರುವ ಬೇಲಿ ಅಲ್ಲಿಗೆ ಹೆಸರಿಗೆ ಮಾತ್ರ. ಅವನು ಮನೆಯಿಂದ ಬಿಸ್ಕೆಟ್ ತಿಂಡಿ ಎಲ್ಲವನ್ನು ತಂದು ಕೊಡುತ್ತಾ ದಿನಗಳನ್ನು ಕಳೆಯುತ್ತಾನೆ. ಆ ಕಾಲಘಟ್ಟದಲ್ಲಿ ಇರುವ ಹಾಗೆ ಚಿತ್ರಿಸಿದ್ದಾರೆ. ಯಹೂದಿಗಳನ್ನು ಬಂಧಿಸಿರುವ ಸ್ಥಳ ಅದನ್ನು ನಿಭಾಯಿಸಲು ಬರುವ ಅಧಿಕಾರಿಯೇ ನಾಯಕನ ತಂದೆ, ಮೊದಲಿಗೆ ಅದೊಂದು ಸಾಮಾನ್ಯ ಸೆರೆ ಮನೆ ಎಂದು ಭಾವಿಸುವ ಆ ಅಧಿಕಾರಿಯ ಮಡದಿ ನಾಯಕನ ತಾಯಿಗೆ ನಂತರ ಅದು ಯಹೂದಿಗಳನ್ನು ಕೊಲ್ಲುವ ಜಾಗವೆಂದು ತಿಳಿದೊಡನೆ ಇಂಥ ಜಾಗದಲ್ಲಿ ನನ್ನ ಮಕ್ಕಳನ್ನು ನಾನು ಬೆಳೆಸಲ್ಲ ಎಂದು ಹಠಕ್ಕೆ ಬಿದ್ದು ಕರೆದುಕೊಂಡು ಹೋಗಲು ಯತ್ನಿಸುವುದು ಹೀಗೆ ಅನೇಕ ಭಾವನೆಗಳನ್ನು ಈ ಚಿತ್ರ ವ್ಯಕ್ತಪಡಿಸುತ್ತಾ ಸಾಗುತ್ತೆ. ಚಿತ್ರದ ಅಂತಿಮ ದೃಶ್ಯವನ್ನು ಯಾವುದೇ ಸದ್ದಿಲ್ಲದೇ ಗದ್ದಲವಿಲ್ಲದೆ ಮೌನವಾಗಿ ಮುಗಿಸುತ್ತಾರೆ ಆ ಮೌನ ಚಿತ್ರ ಮುಗಿದ ಮೇಲೂ ನಮ್ಮನ್ನು ಆವರಿಸುತ್ತೆ.. ವರ್ಲ್ಡ್ ವಾರ್ ಫಿಲಂಸ್ ನೋಡಬೇಕು ಎನ್ನುವವರಿಗೆ ಈ ಚಿತ್ರವನ್ನು ಮೊದಲು ನೋಡಿ ಎನ್ನುವೆ... 

CliK FOR LiNK  

No comments:

Post a Comment