Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

ಕವಿತೆಗಳು


ಪುಟ್ಟ ಮಗಳಿಗೆ! 
------------- 
ಕಾಮನಬಿಲ್ಲ ಕೈಯಲ್ಲಿ ಹಿಡಿದು 
ಕನಸಿಗೂ ಬಣ್ಣ ಹಚ್ಚುವೆಯ! 
ಈ ಹೃದಯದ ಮೇಲೆ ನಿನ್ನ 
ಪುಟ್ಟ ಹೆಜ್ಜೆ ಗುರುತುಗಳ ಮೂಡಿಸುವೆಯ! 
ನೀ ಕರವ ಚಾಚಿದೊಡನೆ 
ಕಾರ್ಮೋಡಗಳು ಕರಗುತ್ತಿವೆ 
ಬೀಳುವ ಮಳೆಯ ಐದು ಬೆರಳೊಳಗೆ 
ಬಂಧಿಸಲಾಗಳಿಲ್ಲವೆಂದು ಬೆಸರವೆ!? 
ಚಿಂತೆ ಏಕೆ ಮಗಳೇ ಅದೃಷ್ಟವಂತ ಹನಿಗಳು 
ಮಾತ್ರವೇ ನಿನ್ನ ಅಂಗೈಗೆ ಚುಂಬಿಸುತ್ತಿವೆ! 
ಈಗ ನಗು ಮಗುವೆ! 
ದೇವತೆ ಧರೆಗಿಳಿದಲೆಂದು 
ತಲೆಯಾಡಿಸುವುದ ಮರೆತು ಮರಗಳು 
ನಿನ್ನನ್ನೇ ನೋಡುತ್ತಿವೆ! 
ಇರುಳಲ್ಲಿ ದಡದಲ್ಲಿ ಆಡುವ ನಿನಗೆ 
ಚಂದಿರನೇ ಕಾಲಡಿ ಬಂದಿಲ್ಲವೆ! 
ಅಲೆಗಳ ಮೇಲೆ ನಿನ್ನೊಂದಿಗೆ ಆಡುವ 
ಅವನ ತಿರುಗಿ ಜೋಪಾನವಾಗಿ ಮನೆಗೆ ಕಳುಹಿಸಿ ಕೊಡು! 
ಉಸಿರಾಡುವ ಹೂವಿದು ಎಂದು ನಿನ್ನಯ 
ಹಿಂದೆ ಬರುವ ಚಿಟ್ಟೆಗಳಿಗೆ ಚಿಟಿಕೆ ಹೊಡೆದು 
ನಿಜವ ಹೇಳಿ ಬಿಡು! 
ನಿನ್ನೊಂದಿಗೆ ನಾ ನಡೆಯುವ ದೂರ! 
ಆದರೆ ಸಾಕು ಆ ಬಾನಿಗೂ ಈ ಭೂವಿಗೂ 
ಇರುವ ಅಂತರ! 
ಇದುವೇ ಅಲ್ಲವೇ ವಿಧಿಯ ಬಳಿ ನಾ ಕೇಳುವ ವರ!
 -----------------------------------

ಮದುವೆ ಮನೆ!
---------------
ಸೀರೆ ಉಡುವವರ ಸ್ಪರ್ಧೆಯೋ
ಎನ್ನುವಷ್ಟು ಅಂದದ ಸೀರೆಯುಟ್ಟ ಹೆಂಗಸರು!
ಮನೆಗೆ ಹೋಗಲು ಸಮಯ ಎಷ್ಟಾಗುತ್ತದೋ
ಎಂದು ತಮ್ಮ ಮಕ್ಕಳ ಮೇಲೆ ಕಣ್ಣಿಟ್ಟು 
ನೋಡಿಕೊಳ್ಳುತ್ತಾ ಯೋಚಿಸುತ್ತಿರುವ ಗಂಡಸರು!
ನಡು ನಡುವೆ ನಡೆದಾಡುವ ನವಿಲುಗಳು
ತಮ್ಮ ಮೇಲೆಯೂ ಒಂದು ಕಿರುನೋಟವ ಎಸೆಯಬಾರದೇ 
ಎಂದು ಮನದೊಳಗೆ ಜಪಿಸುತ್ತಾ 
ಪರಿಮಳಿಸುವ ಸುಗಂಧ ದ್ರವ್ಯ ಲೇಪಿಸಿಕೊಂಡು 
ಇಸ್ತ್ರಿ ಹಾಕಿದ ಬಟ್ಟೆಯೊಳಗಿನ ಹುಡುಗರು!
ಮದುಮಗಳು ಯಾರೆಂದು ಮದುಮಗನಿಗೇ
ಅನುಮಾನ ಮುಡಿಸುವಂತ ಲಲನೆಯರು!
ತಮ್ಮ ಮದುವೆಯ ಮಧುರ ಕ್ಷಣಗಳ 
ಎದೆಯಿಂದ ಎಳೆದು ಮೆಲುಕು ಹಾಕುತ್ತಿರೋ ವೃದ್ಧರು!
ಸುತ್ತಲಿನ ಪರಿವೇ ಇಲ್ಲದೆ ತಮ್ಮದೆ ಆದ 
ಲೋಕದಲ್ಲಿ ಸುತ್ತಾಡುವ ಮುದ್ದು ಮಕ್ಕಳು!
ಸಾವಿರಾರು ಕನಸುಗಳೊಂದಿಗೆ 
ಸಣ್ಣದೊಂದು ಭಯದಜೊತೆ ಮದುಮಕ್ಕಳು!

ಹಳ್ಳಿ ಪ್ರೀತಿ!
------------------
ಹೆತ್ತವರು ಕಣ್ಣೀರ ಕಲ್ಲನ್ನು ಇಟ್ಟು ನನಗೆಂದೆ ಜಾತಿಯ ಗೋರಿ ಕಟ್ಟಿದ್ದಾರೆ!
ಜೀವಂತ ಶವವಾಗಿ ಮಲಗಿರುವ ಈ ಬಡಪಾಯಿ ಮಾತನ್ನು ಕೇಳೋರಾರು..
ನಾಟಿ ನೆಡಲು ನಾನು ಬಂದ ಹುಡುಗ ನಿನ್ನ ಮನಸಲ್ಲಿ ಈಟಿಯ ನೆಟ್ಟು ಬಿಟ್ಟೆ!
ಕೆಸರಲ್ಲಿ ಹುಟ್ಟಿದ ತಾವರೆಯ ನಿನ್ನ ಕಣ್ಣಲ್ಲಿಟ್ಟು ನೀ ಪ್ರೀತಿಸಿದೆ
ಕಣ್ಣೀರ ಕಡಲಲ್ಲಿ ನಿನ್ನನ್ನು ಬಿಟ್ಟು ನಾನು ಒಂದು ದಡವ ನೋಡಿ ಸೇರಿ ಬಿಟ್ಟೆ!
ಬಾನು ಭೂಮಿಯ ಎಂದೂ ಹಿಡಿಯೋದಿಲ್ಲ
ಹಗಲು ಇರುಳು ಇಲ್ಲಿ ಮುಟ್ಟೋದಿಲ್ಲ
ಅರಳುವ ಹೂವೆಲ್ಲಾ ಗುಡಿಯ ಸೇರೋದಿಲ್ಲ
ಕೆಲವು ಗೋರಿಗೂ ಹೋಗಬೇಕು ನಲ್ಲ ...
ನಿನ್ನ ಕಾಲಡಿ ಮಣ್ಣ ಹಿಡಿದು ನಾನು ಇನ್ನು ನಿನ್ನಂತೆಯೇ ಒಂದು ಗೊಂಬೆ ಮಾಡಿಟ್ಟು
ದಿನವೂ ಪೂಜಿಸುವೆ ಉಸಿರ ಹೂವ ಇಟ್ಟು.....!

-ಪ್ರಕಾಶ್ ಶ್ರೀನಿವಾಸ್ 

No comments:

Post a Comment