ತೆಗೆದು ನೋಡಿದ್ರೆ ಅದು ಸುದರ್ಶನ್...
ಏನಪ್ಪಾ ಸುದರ್ಶನ್ ಹೇಗಿದ್ದೀಯಾ?
ನಾನ್ ಸೂಪರ್ ನೀನು ಹೇಗಿದ್ದೀಯಾ ಹೇಗಿದೆ ನಿನ್ನ ಕೆಲಸ?
ಕೆಲಸದ ಮೇಲೇನೆ ಮೈಸೂರಿಗೆ ಬಂದೆ ಮುಗಿಸಿಕೊಂಡು ಈಗ ತವರೂರಿಗೆ ಹೊರಡಬೇಕು, ಒಹ್ ನಿನ್ನ ಕೇಸ್ ಗಳು ಸಕತ್ ಇಂಟರೆಸ್ಟ್ ಆಗಿರುತ್ತೆ ಏನ್ ಅದು ಹೇಳೋ..ಎಂದವನಿಗೆ ಸ್ಮಿತಾಳ ಸಂಪೂರ್ಣ ಕಥೆಯನ್ನು ಹೇಳಿ ಮುಗಿಸಿದ.
ಹಹಹಹಃ ಏನೋ ಸಕ್ಕತ್ ಚಮಕ್....
ಬಿಟ್ಟಾಕು ಈಗ ನಾನ್ ಕಾಲ್ ಮಾಡಿದ್ದು ಒಂದು ಕೇಸ್ ವಿಷಯವಾಗಿಯೇ
ಈ ಸಲ ಯಾವ ಮನುಷ್ಯರ ಜೊತೆಯೂ ನಿನ್ನ ವ್ಯಾಹಾರ ಇಲ್ಲಾ,
ಡೈರೆಕ್ಟ್ ಡೀಲ್ ವಿತ್ ದೆವ್ವ...
ಆದರೆ ಒಂದು ಇದು ಬಹಳ ರಿಸ್ಕಿ ಕೇಸ್..
ಆ ಪ್ರೇತಾತ್ಮವನ್ನು ಕೆಣಕಿ ಉಳಿದ ಉದಾಹರಣೆಯೇ ಇಲ್ಲಾ,
ಯೋಚಿಸಿ ನಿರ್ಧರಿಸು..
ಯಾರೋ ಅದು?
‘ಕೆಂಪಾ’
ನಮ್ಮ ಊರಿನಲ್ಲಿ ಒಂದು ಪಾಳುಬಿದ್ದ ಮನೆ ಇದೆ, ಅದರಲ್ಲಿ ಯಾವುದೋ ಅತೃಪ್ತ ಆತ್ಮ ಸೇರಿಕೊಂಡಿದೆ, ಅದನ್ನು ಅಲ್ಲಿಂದ ನೀನೆ ಬಂದು ಓಡಿಸಿ ಆ ಮನೆಯನ್ನು ಕ್ಲಿಯರ್ ಮಾಡಿ ಕೊಡಬೇಕು , ಆ ಪ್ರೇತಾತ್ಮದ ಹೆಸರೇ ‘ಕೆಂಪಾ’ ಉಳಿದ ವಿಷಯಗಳನ್ನ ಇಲ್ಲಿಗೆ ಬಂದ ಮೇಲೆ ಹೇಳ್ತೀನಿ, ಈ ಸಲ ನಿನ್ನಿಂದ ನನಗೆ ಯಾವುದೇ ಹಣವೂ ಬೇಡ, ಈ ಕೇಸ್ ಡೀಲ್ ಆದ್ರೆ ನನಗೆ ಕಮಿಷನ್ ಸಿಗುತ್ತೆ,
ಮತ್ತೆ ಮತ್ತೆ ಹೇಳ್ತಾ ಇದ್ದೀನಿ ಅದೇ ಇಲ್ಲಿ ಬಹಳ ಮುಖ್ಯ ಆ ದುಷ್ಟಾತ್ಮದ ವಿಷಯಕ್ಕೆ ಹೋದವರು, ಒಬ್ಬರೂ ಸಹ ಉಳಿದಿಲ್ಲಾ....!
ಹಾಗಾಗಿ ನಿನ್ನಿಂದ ಆಗುತ್ತಾ ಅಂತ ಚೆನ್ನಾಗಿ ಯೋಚನೆ ಮಾಡಿ ಒಪ್ಪಿಕೊ?
ಹತ್ತು ನಿಮಿಷಗಳ ಯೋಚನೆಯ ಬಳಿಕ.
ನಾಳೆ ನಿಮ್ಮೂರಿಗೆ ಬರ್ತೀನಿ.. ಅಂದ ಪ್ರಜಿನ್..
ಗುಡ್, ನಿಂಗೆ ಕಾಯ್ತಾ ಇರ್ತೀನಿ, ಉಳಿದ ವಿಷಯ ಇಲ್ಲಿ ಮಾತಾಡೋಣ..
ಎಂದೇಳಿ ಫೋನ್ ಇಟ್ಟ..
ಬೆಳಗ್ಗೆ ಎಂಟಕ್ಕೆ ಎದ್ದು, ತಂದೆಗೆ ಕರೆ ಮಾಡಿ
ಹೀಗೆ ಇನ್ನೊಂದು ಕೇಸ್ ಬಂದಿದೆ, ಅದೇನು ದೊಡ್ಡದಲ್ಲ ಹೀಗೆ ಹೋಗಿ ಹಾಗೆ ಬಂದು ಬಿಡುತ್ತೇನೆ, ಎಂದ ಹಿಂದಿನ ಅಪಾಯವನ್ನು ತಿಳಿಸದೇ..
ಏನ್ ಮಾಡ್ತೀಯೋ ಮಾಡಪ್ಪ, ನನ್ನ ಮಾತು ಕೇಳಬಾರದು ಅಂತ ನೀನು ನಿರ್ಧರಿಸಿದ ಹಾಗಿದೆ, ಇನೇನು ನಾನು ಹೇಳೋದು..
ನಿನ್ನ ನೋಡಿ ಈಗಾಗಲೇ ಆರು ತಿಂಗಳ ಮೇಲಾಯಿತು, ನಿನ್ನಿಂದ ಆಗಬೇಕಾದ ಕೆಲಸಗಳು ಇಲ್ಲಿಯೇ ಅದೆಷ್ಟೋ ರಾಶಿ ಇದ್ದಾವೆ, ನೀನೋ ದೆವ್ವಾ ಭೂತ ಅಂತ ಇದ್ದೀಯಾ.. ನಿನಗೆ ಈಗ ನಾನು ಖಂಡಿತ ಒಪ್ಪಿಗೆ ಕೊಡಲ್ಲ..
ನೀನು ವಾಪಾಸ್ ಬಾ ಅಷ್ಟೇ... ಎಂದು ಕಡಾಖಂಡಿತವಾಗಿ ಹೇಳಿದ ತಂದೆಗೆ..
ಅಪ್ಪಾ ಅಪ್ಪಾ ಚಿಕ್ಕ ಕೇಸ್ ಅಷ್ಟೇ ಪ.. ತುಂಬಾ ದಿನ ಏನ್ ಆಗಲ್ಲಾ,
ಪ್ಲೀಸ್ ಇಲ್ಲಾ ಅನ್ನಬೇಡಿ, ನಿಮಗೆ ನಾನು ಪ್ರಾಮಿಸ್ ಮಾಡ್ತೀನಿ,
ಇದಾದ ಮೇಲೆ ಒಂದು ವರ್ಷಕ್ಕೆ ನಾನು ಯಾವುದೇ ಕೇಸ್ ನೂ ಒಪ್ಪಿಕೊಳ್ಳದೆ,
ನನ್ನ ಪ್ರೀತಿಯ ಅಪ್ಪನ ಜೊತೆಯೇ ಇರುವೆ...ಪ್ಲೀಸ್ ಪ್ಲೀಸ್ ಇಲ್ಲಾ ಅನ್ನಬೇಡಿ....
ಅತ್ತಾ ಮೌನವಾಗೇ ಇದ್ದ ತಂದೆ,
ಸರಿನಪ್ಪಾ ನಿನ್ನ ಈ ಪ್ರಾಮಿಸ್ ನ ನೀನು ಮರೆಯೋ ಹಾಗಿಲ್ಲಾ.
ಇದೆ ಲಾಸ್ಟ್, .ಎಂದವರಿಗೆ..
ಖಂಡಿತಾ.. ನಾನ್ ಪ್ರಾಮಿಸ್ ಮಾಡಿದ ಮೇಲೆ ಮುಗಿತು
ಅಪ್ಪಾ ಅಂದ್ರೆ ನನ್ನ ಮುದ್ದು ಅಪ್ಪಾ, ನಾನು ಈಗ ಅಲ್ಲಿಗೆ ಹೊರಟೆ, ನಿಮಗೆ ನೆಟ್ ವರ್ಕ್ ಸಿಕ್ಕಾಗೆಲ್ಲಾ ಕಾಲ್ ಮಾಡ್ತೀನಿ ಅರೋಗ್ಯ ನೋಡ್ಕೊಲಿ, ಬಂದ ಕೊಡಲೇ
ನಾವಿಬ್ಬರೂ ಎಲ್ಲಾದ್ರೂ ಟ್ರಿಪ್ ಹಾಕೋಣ..
ಅದೇನ್ ಖುಷಿನೋ ಪ ನಿಂಗೆ.. ನಿನ್ನ ಈ ಒಂದು ಸಂತೋಷಕ್ಕಾಗಿಯೇ
ನನ್ನ ಮಾನಸಿಕ ಕಷ್ಟವನ್ನು ಬದಿಗ್ಗೊತ್ತಿ, ನಿನಗೆ ಒಪ್ಪಿಗೆ ಕೊಡೋದು...
ಆಗಾಗ ಕಾಲ್ ಮಾಡ್ತಾ ಇರು.. ಹುಷಾರು...ಮೈಯೆಲ್ಲಾ ಕಣ್ಣಾಗಿರು..
ಸರಿನಪ್ಪ ಈಗ ಟೇಕ್ ಕೇರ್...ಸಿ ಯು ...
ಎಂದು ಫೋನ್ ಇಟ್ಟು, ತನ್ನ ಒಂಟಿ ಸೀಟಿನ ಬೈಕ್ ಮೇಲೆ ಕೂತು
ಮುಂದಿನ ಕಾಯಕದತ್ತಾ... ಹೊರಟ...
ಊರಿಗ ತಲುಪಲು ಸಂಜೆ ಐದಾಯಿತು....
ಸುದರ್ಶನ ಆಫೀಸ್ ಗೆ ಬಂದು.. ಅವನೊಂದಿಗೆ ಅವನ ಮನೆಗೆ ಇಬ್ಬರೂ ಹೊರಟರು..
ಮನೆಯಲ್ಲಿ ದಣಿವಾರಿಸಿಕೊಂಡು ಇಬ್ಬರೂ ಕಾಫೀ ಕುಡಿಯುವಾಗ..
ಪ್ರಜಿನ್ ಈಗ ನಿನ್ನ ಒಬ್ಬರ ಬಳಿಕರ್ಕೊಂಡು ಹೋಗ್ತೀನಿ, ಅವರು ನಿನಗೆ ಕೇಸ್ ನ ಡೀಟೇಲ್ಸ್ ಹೇಳ್ತಾರೆ....
ಎಂದು ಹೇಳಿ ಅಲ್ಲಿಂದ ಅವನನ್ನು ಕರೆದುಕೊಂಡು ಬಂದು.
ಸರ್, ಇವನೇ ಪ್ರಜಿನ್ ಅಂತ ನನ್ನ ಫ್ರೆಂಡ್..
ಪ್ರಜಿನ್ ಇವರೇ ವರ್ಧಾ ಅಂತ .. ಎಂದು ಇಬ್ಬರಿಗೂ ಒಬ್ಬರಿಗೊಬ್ಬರನ್ನು ಪರಿಚಯಿಸಿದ,
ಕುತ್ಕೋಳಿ ಪ್ರಜಿನ್ ಎಂದು ಕೂರಿಸಿ..
ಏನ್ ನೋಡಕ್ಕೆ ಮಾಡೆಲ್ ತರ ಇದ್ದೀರಾ..
ನೀವು ದೆವ್ವ ಭೂತ ಅಂತ ಡೀಲ್ ಮಾಡ್ತೀರಾ ಅಂದ್ರೆ ನಂಬಕ್ಕೆ ಆಗಲ್ಲಾ..
ಸರ್, ದೆವ್ವ ಬಿಡಿಸೋರು ಹೀಗೆ ಇರಬೇಕು ಅಂತ ಏನಿಲ್ಲಾ ಸರ್ ಅದೆಲ್ಲಾ ಫಿಲಂ ಗೆ
ಮೋಸ ಮಾಡಕ್ಕೆ ಬೇಕಾಗಿರೋ ವೇಷಗಳು ಅಷ್ಟೇ,
ನೀವ್ ಹೇಳೋದು ನಿಜಾನೆ..ಸರಿ ವಿಷಯಕ್ಕೆ ಬರ್ತೀನಿ..
ಇಲ್ಲಿಂದ ಮುಂದೆ ಒಂದು ಪಾಳುಬಿದ್ದ ಮನೆಯಿದೆ.. ಅದರೊಳಗೆ ಪ್ರೇತಾತ್ಮಗಳ ಓಡಾಟವಿದೆ ಅಂತ ಅಲ್ಲಿಯ ಜನರು ಮಾತಾಡಿಕೊಳ್ಳೋರು,
ಮೊದಲು ನಾನೂ ಸಹ ನಂಬಿರಲಿಲ್ಲ...
ನಾವು ಬಿಲ್ಡರ್ಸ್, ಅಲ್ಲಿನ ಜಾಗದೊಂದಿಗೆ ಸುತ್ತಲೂ ಇರುವ ಎಲ್ಲಾ ಜಾಗವನ್ನು ಖರೀದಿಸಿದ್ದೀನಿ, ಮಧ್ಯದಲ್ಲಿ ಇರೋ ಆ ಮನೆ ಮಾತ್ರವೇ ನನಗೆ ದೊಡ್ಡ ತಲೆ ನೋವಾಗಿದೆ.. ಅದು ಯಾರಿಗೆ ಸೇರಿದ್ದು ಆ ಮಾಲೀಕರು ಇದ್ದಾರ ಅಂತ ಎಲ್ಲಾ ಹುಡುಕಿದೆ. ಯಾರೂ ಸಿಗಲಿಲ್ಲಾ.. ಕೊನೆಗೆ ಸೈಟ್ ರಿಜಿಸ್ಟರ್ ಗೆ ಹಣ ಕೊಟ್ಟು,
ಅದನ್ನು ಯಾರೋ ಕೊಂಡು ಕೊಂಡ ಹಾಗೆ, ಅವರಿಂದ ನಾನು ಖರೀದಿಸಿದ ಹಾಗೆ ಪೇಪರ್ ಸಹ ರೆಡಿ ಮಾಡಿ ಆಯಿತು, ಈಗ ಅದನ್ನು ಲೀಗಲ್ ಆಗಿ ಯಾರೂ ನನ್ನ ಪ್ರಶ್ನೆ ಮಾಡೋ ಹಾಗೆ ಇಲ್ಲಾ, ಸರಿ ಆ ಮನೆಯನ್ನು ನೆಲಸಮ ಮಾಡಿ, ಸಂಪೂರ್ಣ ಜಾಗವನ್ನು ಫ್ಯಾಕ್ಟರಿ ಮಾಡಕ್ಕೆ ಮಾರೋದು ಅಂತ ನಿರ್ಧರಿಸಿ, ಜೆಸಿಬಿ, ತಗೊಂಡು ಹೋಗಿ ಒಡೆಯಕ್ಕೆ ನೋಡಿದೋ, ಆಗಲೇ ನನಗೆ ಆ ಮನೆಯಲ್ಲಿ ಏನೋ ಇದೆ ಅಂತ ಅನ್ನಿಸಕ್ಕೆ ಶುರುವಾಗಿದ್ದು... ಜೆಸಿಬಿ ಕೆಟ್ಟು ನಿಂತು ಬಿಡೋದು, ಹಾಗೂ ಏನೇನೋ ಮಾಡಿ ಮತ್ತೆ ರೆಡಿ ಮಾಡಿ ಒಡೆಯಕ್ಕೆ ನೋಡಿದ್ರೆ ಜೆಸಿಬಿಯೇ ಉರುಳಿ ಬಿಡೋದು,
ನಮ್ಮಿಂದ ಅಷ್ಟೆಲ್ಲಾ ಪ್ರಯತ್ನ ಮಾಡಿದ್ರೂ ಆ ಮನೆಯ ಕಾಪೌಂಡ್ ನ ಅಷ್ಟೇ ಸ್ವಲ್ಪ ಒಡೆಯಕ್ಕೆ ಆಗಿದ್ದು... ಆಮೇಲೆ ಅವರು ಇವರು ಹೇಳಿದ ದೆವ್ವ ಓಡಿಸೋರು, ಪೂಜೆ ಅದು ಇದು ಅಂತ ಎಲ್ಲವನ್ನೂ ಮಾಡಿ ಆಯಿತು, ಬಂದವರು ಅಮಾನುಷವಾಗಿ ಸತ್ತು ಬಿದ್ದಿದ್ದಾಗಲೇ ಅದರ ತೀವ್ರತೆ ಅರ್ಥವಾಯಿತು.. 35ಕೋಟಿ ಬಂಡವಾಳ ಸುರಿದು.
ತಿಂಗಳು ತಿಂಗಳು ಬಡ್ಡಿ ಕಟ್ಟೋದೇ ಆಗಿದೆ.. ಯಾಕಾದ್ರೂ ಆ ಜಾಗಕ್ಕೆ ಕೈ ಹಾಕಿದ್ನೋ ಅಂತ ಅನ್ನಿಸಿ ಬಿಟ್ಟಿದೆ...ಏನ್ ಮಾಡೋದು ಅಂತ ಇದ್ದಾಗಲೇ ನಿಮ್ಮ ಸ್ನೇಹಿತ ಸುದರ್ಶನ್ ನಿಮ್ಮ ಬಗ್ಗೆ ಹೇಳಿದ್ರು...ಅದಕ್ಕೆ ಕರೆಸಿದೋ...
ಎಲ್ಲವನ್ನೂ ಕೇಳಿಸಿಕೊಂಡ ಪ್ರಜಿನ್..
ಆ ಮನೆಯನ್ನು ನೋಡಬಹುದ?
ಈಗ್ಲಾ? ಸಮಯ ಹತ್ತಾಗಿದೆ... ಬನ್ನಿ ಇರ್ಲಿ...
ಮೂವರು ಕಾರಿನಲ್ಲಿ ಹೊರಟು, ಆ ಮನೆಯ ಮುಂದೆ ಬಂದು ನಿಂತರು..
ಕಾರಿನಿಂದ ಕೆಳಗೆ ಇಳಿಯುತ್ತಲೇ ಕಾರಿನ ಮುಂದಿನ ಲೈಟ್ ನಿಂದ ಬಂದ ಬೆಳಕಿನಲ್ಲಿ ಕಾಣಿಸುತ್ತಾ ಇದ್ದ,
ಆ ಮನೆಯನ್ನು ಸಂಪೂರ್ಣವಾಗಿ ಮೇಲಿನಿಂದ ಕೆಳಗಿನ ತನಕ ನೋಡುತ್ತಾ ನಿಂತ ಪ್ರಜಿನ್ ಗೆ...
ಇದೆ ನಾನು ಹೇಳಿದ ಮನೆ...
ಇಲ್ಲಿ ಯಾರಿದ್ದರು ಅಂತ ಏನಾದ್ರೂ ಮಾಹಿತಿ ಇದೆಯಾ?
ಮನೆಯ ಪತ್ರ ತೆಗೆಸಿ ನೋಡಿದಾಗ..
ಈ ಮನೆ ರಂಗಯ್ಯಾ... ಅನ್ನೋರಿಗೆ ಸೇರಿದ್ದು. ಅವರ ಮಕ್ಕಳು.
ಮಲ್ಲಯ್ಯಾ ಇನ್ನೊಬ್ಬ ಸೋಮಾ ಅಂತ ಇತ್ತು..
ಅದಾದ ಮೇಲೆ ಇಲ್ಲಿಗೆ ಬಂದು ಈ ಪ್ರೇತಾತ್ಮನ ಓಡಿಸುತ್ತೇನೆ ಅಂತ ಬಂದಿದ್ದ
ಒಬ್ಬ ಮಂತ್ರವಾದಿ ಒಂದು ವಿಷಯ ಹೇಳಿದ..
ಈ ಮನೆಗೆ ಸೇರಿದವರನ್ನು ಹುಡುಕಿಸಿ, ಅವರಿಗೆ ಈ ಮನೆಯ ಹಣವನ್ನು ಕೊಟ್ಟು,
ಅವರಿಂದ ಪೂಜೆ ಮಾಡಿಸಿದ್ರೆ, ಆ ಆತ್ಮಕ್ಕೆ ಮುಕ್ತಿ ಸಿಗಬಹುದು ಅಂತ..
ನಾನು ಎಲ್ಲಾ ಕಡೆಯೂ ಹುಡುಕಿಸಿದೆ.. ಎಲ್ಲೂ ಈ ಮನೆಗೆ ಸೇರಿದವರ ಮಾಹಿತಿ ಸಿಗಲಿಲ್ಲಾ. ಅದಾಗಲೇ ಇಪ್ಪತೈದು ಮೂವತ್ತು ವರ್ಷ ಆಗಿದೆ...ಈ ಮನೆ ಈಗಾಗಿ..
ಹಾಗೂ ಅವನೇ ಹೇಳಿದ್ದು ಒಳಗಿರೋದು ಯಾವುದೋ ಹೆಣ್ಣಿನ ಪ್ರೇತಾತ್ಮ..
ಅದರ ಹೆಸರು ಕೆಂಪಾ.. ಎಂದು.. ನಾನು ಮತ್ತೆ ಬಂದು ಅದನ್ನು ಓಡಿಸುತ್ತೇನೆ ಅಂತ ಹೋದವನು ಬರಲೇ ಇಲ್ಲಾ...
ಅದನ್ನೆಲ್ಲಾ ಕೇಳಿಸಿಕೊಂಡು ತನ್ನೊಳಗೆ ಯೋಚಿಸುತ್ತಾ ನಿಂತಿದ್ದ ಪ್ರಜಿನ್ ಗೆ..
ಈ ಮನೆಯ ವ್ಯಾಲ್ಯೂ ಇಪ್ಪತ್ತು ಲಕ್ಷ.. ಅದರ ಮೇಲೆ ಐದು ಲಕ್ಷ ಕೊಡ್ತೀನಿ..
ಹೇಳಿ ಆಗುತ್ತಾ? ಈ ಮನೆಯನ್ನು ಕೆಡವಿ ನೆಲಸಮ ಮಾಡುತ್ತಾ ಇದ್ದ ಹಾಗೆ
ಹಣ ನಿಮ್ಮ ಕೈ ಸೇರುತ್ತೆ ಯೋಚಿಸಿ ಹೇಳಿ......
ಇದೆ ಮೊದಲು ಇಷ್ಟು ದೊಡ್ಡ ಮೊತ್ತದ ಕೇಸ್ ಡೀಲ್ ಮಾಡಿ....
ಎಂದು ಯೋಚಿಸುತ್ತಾ ಇದ್ದ ಪ್ರಜಿನ್ನ ಮುಖವನ್ನೇ ಸುದರ್ಶನ್ ನೋಡುತ್ತಿದ್ದ..
ಸರಿ, ನಾನು ಪ್ರಯತ್ನಿಸ್ತೀನಿ.....
ಅಗಲಿ.. ನಿಮಗೆ ಏನೇ ಸಹಾಯ ಬೇಕು ಅಂದ್ರು ಕೇಳಿ...
ಸರಿ ಎಂದು ತಲೆಯಾಡಿಸಿದ ಪ್ರಜಿನ್..
ಮೂವರು ಅಲ್ಲಿಂದ ಹೊರಟರು..
ಮಾರನೆಯ ದಿನ ಪ್ರಜಿನ್ ಒಬ್ಬನೇ ಬೆಳಗ್ಗೆ ಹತ್ತಕ್ಕೆ ಅಲ್ಲಿಗೆ ಬಂದ..
ಮಳೆಯಲ್ಲಿ ನೆನೆದು ಶೀತಲಗೊಂಡಿದ್ದ ಗೋಡೆಗಳು..
ತುಕ್ಕು ಹಿಡಿದು ಅರ್ಧ ಮುರಿದು ನೇತಾಡುವ ಗೆಟ್. ಕಾಪೌಂಡ್ ನ ಒಳಗೆ
ಕಸದ ರಾಶಿ....
ಎಲ್ಲವನ್ನೂ ನೋಡಿ.. ಗೆಟ್ ಅನ್ನು ತಳ್ಳಿ..ಗಮನವಾಗಿ ಹೆಜ್ಜೆ ಇಡುತ್ತಾ ಮುಖ್ಯದ್ವಾರದ ಬಳಿಗೆ ಬಂದ...
ಬಾಗಿಲು ತೆರೆದು ಒಳ ಹೋಗುವ ಮುನ್ನ ಮನೆಯನ್ನು ಒಂದು ಸುತ್ತು ಹಾಕೋಣ ಅನ್ನಿಸಿ.. ಹಿತ್ತಲಿನ ಕಡೆಗೆ ಬಂದು ನೋಡಿದ..ಗಿಡಗಳ ರಾಶಿಯಲ್ಲಿ ಆ ಜಾಗವೇ ಪೊದೆಯಂತೆ ಆಗಿತ್ತು..
ಮತ್ತೆ ಬಾಗಿಲ ಬಳಿ ಬಂದು...ಗಟ್ಟಿಯಾಗಿದ್ದ ಕದಗಳನ್ನು ಬಲವಾಗಿ ತಳ್ಳಿ ಒಳ ಬಂದ..
ದೊಡ್ಡದಾದ ಮನೆ.. ಯಾರೋ ಎಂದೋ ವಾಸವಿದ್ದು ಹಾಗೆ ಬಿಟ್ಟು ಹೋದ ಕುರುಹುಗಳನ್ನು.. ಚೂರಾದ ಕುರ್ಚಿ..ಮಡಿಕೆ..ಹರಿದು ಹಾಳಾದ ಬಟ್ಟೆಗಳು ಹೇಳುತ್ತಿತ್ತು..
ತಲೆಯನ್ನು ಮೇಲೆತ್ತಿ ನೋಡಿದರೆ..ಕೆಲವು ಬಾವಲಿಗಳು ತಲೆ ಕೆಳಗೆ ನೇತಾಡುತ್ತಾ ಇದ್ದವು.. ದೊಡ್ಡದಾದ ಕಿಟಕಿಯ ಹೆಂಚಿನ ಮನೆ....
ಅದನ್ನೆಲ್ಲಾ ಗಮನಿಸಿ
ಸುದರ್ಶನ್ ಮನೆಗೆ ಹಿಂತಿರುಗಿದ...
ರಾತ್ರಿ ಹನ್ನೊಂದಕ್ಕೆ ಒಬ್ಬನೆ ಮತ್ತೆ ಅಲ್ಲಿಗೆ ತನ್ನ ಉಪಕರಣಗಳನ್ನು ಹಿಡಿದುಕೊಂಡು ಬಂದ.. ನೆಗಟಿವ್ ಎನರ್ಜಿ ತೋರಿಸುವ ಯಂತ್ರದಿಂದ ಹಿತ್ತಲಿನತ್ತಾ ಬಂದು ಪರಿಶೀಲಿಸಿದ... ಯಾವುದೇ ಸೂಚನೆಯೂ ಇಲ್ಲಾ...
ಹಾಗೆ ಅದನ್ನು ಹಿಡಿದುಕೊಂಡು ಮುಖ್ಯದ್ವಾರದ ಮುಂದೆ ನಿಂತು ನೋಡುವಾಗ..
ಸೂಚನೆಯ ಮುಳ್ಳು ಮೆಲೇಳುತ್ತಿತ್ತು....ಮುಳ್ಳಿನ ಸ್ಥಾನ ಅತ್ಯಂತ ಅಧಿಕವೆಂದು ಸೂಚಿಸುವ ಕೆಂಪು ಗುರುತಿನ ಮೇಲಿತ್ತು...
ತಲೆಯನ್ನು ಮೇಲೆತ್ತಿ ಮನೆಯನ್ನು ನೋಡುತ್ತಾ..
ಹಾಗಿದ್ರೆ ಇಲ್ಲಿ ಅಪಾಯಕರವಾದ ಅಮಾನುಷ ಶಕ್ತಿ ಇರೋದು ಸತ್ಯವೇ!
ಇನ್ನು ಹೆಚ್ಚಿನ ಸಮಯ ಇಲ್ಲಿರೋದು ಬೇಡವೆನ್ನಿಸಿ..ಅಲ್ಲಿಂದ ರೂಮಿಗೆ ಬಂದ...
ಆ ಕ್ಷಣದಿಂದ...ಅದನ್ನು ಹೇಗೆಲ್ಲಾ ಎದುರಿಸಬೇಕು ಎನ್ನುವುದಕ್ಕೆ..
ಹಲವಾರು ಬುಕ್ಸ್ ಓದಿದ, ನೆಟ್ ನಲ್ಲಿ ಅಂತರ್ಜಾಲವನ್ನೆಲ್ಲಾ ಜಾಲಾಡಿದ
ಬೇಕು ಎನ್ನುವ ಮತ್ತಷ್ಟು ಉಪಕರಣಗಳನ್ನೂ ಖರೀದಿಸಿದ...
ತುಂಬಿದ ಹುಣ್ಣಿಮೆಯಂದು...ಎಲ್ಲ ರೀತಿಯಲ್ಲಿ ಮಾಡಿಕೊಂಡ ಸಿದ್ಧತೆಯೊಂದಿಗೆ...
ಧೈರ್ಯದಿಂದ ಮನೆಯೊಳಗೇ ಪ್ರವೇಶಿಸಿದ....
ಗಾಢವಾದ ಕತ್ತಲ ಮನೆಯೊಳಗೇ ಹೆಂಚು ಮುರಿದ ಬಿದ್ದ ಛಾವಣಿಯಿಂದ
ಬೆಳದಿಂಗಳು ನೆಲದ ಮೇಲೆ ಹರಡಿಕೊಂಡಿತ್ತು... ಮೊದಲಿಗೆ ಒಂದು ವೃತ್ತಾಕಾರವನ್ನು
ಬರೆದು ಎರಡು ಪುಟ್ಟದಾದ ಹಣತೆಯನ್ನು ಹಚ್ಚಿಟ್ಟು,
ಅದರ ಮುಂದೆ ಕುಳಿತು.. ತಂದಿದ್ದ ದೊಡ್ಡದಾದ ಟಾರ್ಚ್ ಆನ್ ಮಾಡಿದ..
ಹೇಯ್ ಕೆಂಪಾ ಬಾ ಬಾ ....ಎಂದು ಕಿರುಚಿದ....
ಪಕ್ಕದಲಿದ್ದ ಯಂತ್ರದಲ್ಲಿ ಯಾವುದೇ ದುಷ್ಟ ಶಕ್ತಿಯ ಸುಳಿವೂ ಕಂಡು ಬರಲಿಲ್ಲಾ...
ಮತ್ತೊಮ್ಮೆ ಹೇಯ್ ಕೆಂಪಾ ಬಾ ಬಾ ....ಎಂದು ಕಿರುಚಿದ....
ಈಗ ಬ್ಯಾಗ್ ನಲ್ಲಿ ಇಟ್ಟುಕೊಂಡಿದ್ದ ನೀಲಿ ಬಣ್ಣವನ್ನು
ಚೆಲ್ಲುವ ಟಾರ್ಚ್ ಆನು ಆನ್ ಮಾಡಿಟ್ಟ....
ಆ ಬೆಳಕಿನಲ್ಲೂ ಒಮ್ಮೆ ಗಮನಿಸಿದ ಕಣ್ಣಿಗೆ ಏನೂ ಗೋಚರಿಸಲಿಲ್ಲಾ..
ಪುಸ್ತಕವನ್ನು ಹಿಡಿದು ಅದರಲ್ಲಿ ಇದ್ದ ಪದಗಳನ್ನು ಗೊಣಗಲು ಶುರು ಮಾಡಿ,
ಅರ್ಧಗಂಟೆಗೆ ಯಂತ್ರದಲ್ಲಿನ ಮುಳ್ಳು ಅತ್ತಿತ್ತ ಆಡಲು ಶುರುಮಾಡಿತು...
ಅದನ್ನು ನೋಡುತ್ತಾ, ತನ್ನ ಉಚ್ಚಾರಣೆಯ ಸದ್ದನ್ನು ಜೋರಾಗಿಸಿದ..
ಹಣತೆಯ ಬೆಳಕು ಗಾಳಿಗೆ ಸಿಲುಕಿ ನರ್ತಿಸುತ್ತಿತ್ತು...
ಮತ್ತೆ ತನ್ನ ಜವಪವನ್ನು ಮುಂದುವರಿಸಿದ...ಈಗ ನೀಲಿ ಬೆಳಕಿನಲ್ಲಿ ಹೊಗೆಯು ತುಂಬಾ ತೊಡಗಿತು... ಹಾಗೆಯೇ ನೋಡುತ್ತಾ ಇದ್ದ ಹಾಗೆ, ಹೊಗೆಯೊಳಗೆ ಅಕ್ರೋಶ ಭರಿತ ಕಣ್ಣುಗಳು ಕಾಣಿಸಿತು, ಹಾಗೆ ಮೆಲ್ಲಗೆ ಆ ವೃತ್ತಾಕಾರದಲ್ಲಿ ಹೊಗೆ ತುಸು ಕರೆಗಿದಂತೆ,
ಕುಳಿತಿದ್ದ ಕೆಂಪಾ ಕಂಡಳು, ಅವಳ ಅಘೋರವಾದ ಆಕೃತಿಯನ್ನು ಕಂಡೂ ಸಹ
ಯಾವುದೇ ಹೆದರಿಕೆಯನ್ನು ತೋರದ...
ಹೇಳು ಯಾರ್ ನೀನು?
ಹೇಳಲ್ಲಾ..ಎನ್ನುವ ಅದರ ದನಿ ಅತ್ಯಂತ ಗಟ್ಟಿಯಾಗಿತ್ತು..
ಹೌದಾ...ಎನ್ನುತ್ತಾ ಎಡಗೈಯನ್ನು ಮೆಲ್ಲಗೆ ಕೊರಳಿನ ಬಳಿ ತಂದು
ಧರಿಸಿದ್ದ ಮೈಕ್ ಅನ್ನು ಆನ್ ಮಾಡಿ, ಮೊದಲು ಹೇಳುತ್ತಿದ್ದ ಪದಗಳ ಉಚ್ಚಾರಣೆಯನ್ನು ಮತ್ತೊಮ್ಮೆ ಹೇಳಲು ಆರಂಭಿಸಿದ, ಅದು ಅಲ್ಲಿಟ್ಟಿದ್ದ ಸ್ಪೀಕರ್’ಗಳಲ್ಲಿ
ಕಿವಿಯನ್ನು ಸೀಳುವಂತೆ ಘರ್ಜಿಸುತ್ತಿತ್ತು....
ಅದನ್ನು ಕೆಂಪಾಳಿಂದ ಸಹಿಸಲಾಗದೆ ಒದ್ದಾಡಿ....ಒದ್ದಾಡಿ..
ಆಯ್ತು ಆಯ್ತು ಹೇಳ್ತೀನಿ ಹೇಳ್ತೀನಿ....
ಎಂದಳು..
ಅವನು ಉಚ್ಚಾರಣೆಯನ್ನು ನಿಲ್ಲಿಸಿದ...
ವಾತಾವರಣ ಶಾಂತವಾದ ಬಳಿಕ...
ಈಗ ಹೇಳು ಯಾರು ನೀನು ಯಾಕಿಲ್ಲಿ ಇದ್ದೀಯಾ?
ನನ್ನ ಹೆಸ್ರು ಕೆಂಪಾ...ನಾನು ಈ ಮನೆಯ ಸೊಸೆ!
ಇದೆಯಲ್ಲೇ ಮನೇಲಿ ನಾನು ನನ್ನ ಗಂಡಾ ಅತ್ತೆ ಮಾವ ಮೈದುನ
ಎಲ್ಲರೂ ಇದಿದ್ದು.. ಇಲ್ಲಿಗೆ ಮದ್ವೆ ಮಾಡಿಕೊಂಡು ಬಂದ ಮೇಲೆ,
ಯಾರೂ ಸಹ ಬೇರೆ ಮನೆ ಹುಡುಗಿ ಅಂತ ನೋಡದೆ..
ಎಲ್ಲರೂ ನನ್ನ ಸ್ವಂತ ಮಗಳ ಹಾಗೆ
ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾ ಇದ್ದರು...
ನಾನು ಗರ್ಭಧರಿಸಿದೆ, ಅದಾಗಲೇ ನನಗೆ ಎರಡು ಮಗು ಹುಟ್ಟುತ್ತಲೇ ಸತ್ತೋಗಿತ್ತು,
ಹಾಗಾಗಿ ಈ ಸಲ ಹಾಗೆ ಏನೂ ಆಗಬಾರದು ಅಂತ ನನ್ನ ಜೊತೆಯೇ ಇದ್ದು
ನನ್ನ ಗಂಡ ನನ್ನ ಪ್ರತಿಯೊಂದು ನೋವಿಗೆ, ಆಸೆಗೆ ಸ್ಪಂದಿಸುತ್ತಾ ಇದ್ದರು,
ಸಮಯಕ್ಕೆ ಹಣ್ಣು ಊಟ, ಅಂತ ನಾನ್ ಏನೇ ಕೇಳಿದ್ರೂ ತಂದು ಕೊಡೋರು...
ನನಗೆ ಎಂಟು ತಿಂಗಳಾಯಿತು, ಅದೊಂದು ರಾತ್ರಿ....
ಮಲಗಿದ್ದ ನನಗೆ ಎಚ್ಚರವಾಯಿತು, ಪಕ್ಕದಲ್ಲಿ ನೋಡಿದ್ರೆ ನನ್ನ ಗಂಡ ಇಲ್ಲಾ..
ಸರಿ ಹೊರಗೆ ಹೋಗಿರಬಹುದು ಅಂತ ಮೊದಲಿಗೆ ಹಿತ್ತಲಿಗೆ ಬಂದು ನೋಡಿದೆಅಲ್ಲಿಲ್ಲಾ, ವರಾಂಡಗೆ ಬಂದು ನೋಡಿದ್ರೆ, ಮನೆಯಲ್ಲಿ ಒಬ್ಬರೂ ಇಲ್ಲಾ...
ಎಲ್ಲಿ ಹೋದ್ರು ಅಂತ ನೋಡೋಣ ಎಂದು, ಬಾಗಿಲು ತೆಗೆಯಕ್ಕೆ ಹೋದೆ,
ಬಾಗಿಲು ಹೊರಗಿನಿಂದ ಬೀಗ ಹಾಕಿತ್ತು....
ಎಲ್ಲಿಗೆ ಹೋದ್ರು ಎಲ್ಲಾ, ಯಾಕೆ ಬೀಗ ಹಾಕಿಕೊಂಡು ಮಧ್ಯರಾತ್ರಿ ಹೋಗಿದ್ದಾರೆ, ಎಂದು ಯೋಚಿಸುತ್ತಾ ಅಲ್ಲಿದ್ದ ಕುರ್ಚಿಯ ಮೇಲೆ ಕುಳಿತು, ಹಾಗೆ ಮಲಗಿ ಬಿಟ್ಟಿದ್ದೆ, ಅವರೆಲ್ಲಾ ಮತ್ತೆ ಬಂದಾಗ ಮುಂಜಾನೆ ನಾಲಕ್ಕಾಗಿತ್ತು, ಎಲ್ಲಿಗೆ ಹೋಗಿದ್ರಿ ಏನು ಅಂತ ಕೇಳಿದ್ರೆ, ನನ್ನ ಗಂಡ ಅತ್ತೆ ಮಾವ ಮೈದುನ ಯಾರೂ ಸಹ ಸರಿಯಾದ ಉತ್ತರವನ್ನು ನೀಡದೆ,
ಏನೋ ಒಂದು ಹೇಳಿ ಸುಮ್ಮನಾದರು....
ನನಗೆ ಒಂಬತ್ತು ತಿಂಗಳು ತುಂಬಿತು...ಈಗ್ಲೋ ಆಗ್ಲೋ ಅಂತ ಮಗು ಹುಟ್ಟುವ ಗಳಿಗೆ ಹತ್ರವಾಯಿತು, ನನ್ನ ಅತ್ತೆ, ಮಾವ, ಮೈದುನ ಬರಲಿಲ್ಲಾ, ನನ್ನ ಗಂಡನೇ ನನ್ನ ಕರ್ಕೊಂಡು ಹೋಗಿ
ಇದೆ ಊರಲ್ಲಿ ಇರೋ ಸರ್ಕಾರಿ ಅಸ್ಪತ್ರೆಗೆ ಸೇರಿಸಿದ್ರು...ಸಮಯ ಸಂಜೆ ಆರು...
ಆ ನೋವಿಗೆ ನಾನು ಜ್ಞಾನತಪ್ಪಿದೆ.. ಮತ್ತೆ ನನಗೆ ಪ್ರಜ್ಞೆಬಂದು ಕಣ್ಣು ಬಿಡುವಾಗ,
ನಾನು ಇದಿದ್ದು ಇದೆ ಮನೆಯಲ್ಲಿ.. ಸಮಯ ರಾತ್ರಿ ಒಂದು,
ಪಕ್ಕದಲ್ಲಿ ಮಗುವಿತ್ತು.... ನನ್ನ ಸುತ್ತಲೂ ಅತ್ತೆ, ಮಾವ, ಮೈದುನ, ಜೊತೆಗೆ ನನ್ನ ಗಂಡ.. ನಾನು ಕಣ್ಣು ಬಿಡುವುದನ್ನೇ ಕಾಯುತ್ತಾ ಇದ್ದು..
ಎದ್ದೇಲೆ ಮೇಲೆ..ಎಂದು ಗದರಿಸಿದರು ಅತ್ತೆ,
ಅಂದೇ ಮೊದಲು ಅವರಿಂದ ಅಂತದೊಂದು ವರ್ತನೆಯನ್ನು ನಾನು ಕಂಡಿದ್ದು,
ನನ್ನಿಂದ ಎದ್ದೇಳಲು ಆಗುತ್ತಿರಲಿಲ್ಲಾ ಅದರೂ ಎದ್ದು ಗೋಡೆಗೆ ಒರಗಿ ಕೂತೆ, ಇಷ್ಟು ವರ್ಷದ ನಮ್ಮ ಕನಸುಗಳನ್ನೆಲ್ಲಾ ಮಣ್ಣು ಫಾಲಾಗಿಸಿ ಬಿಟ್ಟಳೇ,
ಬೇವರ್ಸಿ...ಮುಂ* ಎಂದು ನನ್ನ ಗಂಡ ಕೂಗಾಡಿದ..
ನನಗೆ ಒಂದು ಅರ್ಥವಾಗದೆ, ಯಾಕೆ ಏನ್ ಆಯ್ತು,
ಎಂದು ಕೇಳುವಾಗ, ಏನ್ ಆಯ್ತಾ..ನಿನ್ನ ಪಕ್ಕದಲ್ಲಿರೋ ಆ ಪಿಂಡಾನ
ನೋಡು ಸ್ವಲ್ಪ ಎಂದು ಮಾವ ಹೇಳಿದಾಗಲೇ, ಮಗುವನ್ನು ನಾನು ಮುಟ್ಟಿ ನೋಡಿದ್ದು..
ಈ ಮಗವೂ ಸಹ ಹುಟ್ಟುವಾಗಲೇ ಸತ್ತಿತ್ತು.....
ಹೊಟ್ಟೆಯಲ್ಲಿನ ನೋವಿಗಿಂತಲೂ ಆ ಸಾವಿನ ನೋವು ಎದೆಯಲ್ಲಿ ಅಧಿಕವಾಗಿತ್ತು,
ಅಯ್ಯೋ ಅಯ್ಯೋ ಎಂದು ಆ ಕಂದನನ್ನು ಎತ್ತಿಕೊಂಡು ನನ್ನದೆಗೆ ಒರಗಿಸಿಕೊಂಡು,
ಅಳುತ್ತಾ.....ಹಿಂದಿನ ಮಗುವಿನ ಹಾಗೆ ಈ ಮಗುವೂ ಈ ಮಡಿಲಿಗೆ ಬರುವ ಮುನ್ನವೇ ಮಣ್ಣಾಯಿತೆ ಎಂದು ಗೋಳಾಡುವ ನನ್ನನ್ನು ನೋಡಿ,
ಹಿಂದೆ ಹುಟ್ಟಿದ ಮಕ್ಕಳು ಸತ್ತಿರಲಿಲ್ಲಾ, ಅವುಗಳನ್ನಾ ಸಾಯಿಸಿದ್ದೆ ನಾವು..
ಎಂದು ನನ್ನ ಗಂಡ ಹೇಳುವಾಗ, ಅದಾಗಲೇ ಈಟಿಯಲ್ಲಿ ಇರಿದಂತೆ ಇದ್ದ
ಎದೆಯೊಳಗೆ ಜ್ವಾಲೆಯನ್ನು ಸುರಿದಂತೆ ಆಯಿತು,
ಯಾಕೆ ಎಂದೂ ಸಹ ಕೇಳದೆ ಕೆನ್ನೆಯ ಮೇಲೆ ಇಳಿಯುತ್ತಿದ್ದ ಕಂಬನಿಯೊಂದಿಗೆ
ಅವರನ್ನೇ ನೋಡುತ್ತಿದ್ದೆ...
ಹೌದು..ಈಗಾಗಲೇ ಎರಡು ಮಕ್ಕಳನ್ನು ನರಬಲಿ ಕೊಟ್ಟಾಗಿದೆ..
ಈಗ ಈ ಮೂರನೆಯ ಮಗುವಿನೊಂದಿಗೆ ನಿನ್ನನ್ನು ಬಲಿ ಕೊಟ್ಟು
ಮುಕ್ತಾಯ ಮಾಡಿದ್ರೆ ,
ನಮಗೆ ಒಂದು ನಿಧಿ ಸಿಗೋದಿತ್ತು, ಎಲ್ಲಾ ಹಾಳು ಮಾಡಿಬಿಟ್ಟಲ್ಲೇ..
ಎಂದು ಅವರೇಳಿ ಮುಗಿಸಿದ ಕೂಡಲೇ,
ನಾವು ಸ್ಮಶಾನದಲ್ಲಿ ದುಷ್ಟ ಶಕ್ತಿಗಳನ್ನು ಪೂಜಿಸಿ,
ಸಿಗುವ ಶಕ್ತಿಯನ್ನೆಲ್ಲಾ ಪ್ರಸಾದವಾಗಿಸಿ ನಿನಗೆ ತಿಳಿಯದಂತೆ,
ನಿನಗೆ ಕೊಡ್ತಾ ಇದ್ದೋ, ಅದರಿಂದ ಹುಟ್ಟುವ ನಿನ್ನ ಮಗುವು ಸಾಮಾನ್ಯರಂತೆ ಇಲ್ಲದೆ, ಅದರಲ್ಲಿ ಅಸಾಮಾನ್ಯ ಶಕ್ತಿ ಇರುತ್ತಿತ್ತು, ಅದನ್ನು ಬಲಿ ಕೊಟ್ಟರೆ ಮಾತ್ರವೇ,
ನಿಧಿಯನ್ನು ಕಾಯುವ ಪ್ರೇತಾತ್ಮಗಳಿಗೆ ತೃಪ್ತಿ ಸಿಗುತ್ತಿತ್ತು..
ಎಂದು ಅತ್ತೆ ಹೇಳುವಾಗಲೇ,
ಹಿಂದಿಮ್ಮೆ ಮಧ್ಯರಾತ್ರಿಯಲ್ಲಿ ಇವರೆಲ್ಲರೂ ಇದೆ ಕಾರಣಕ್ಕಾಗಿಯೇ ಮನೆಯಲ್ಲಿ ಇಲ್ಲದಿರುವುದು ನೆನಪಾಯಿತು...
ಅಯ್ಯೋ ಅಯ್ಯೋ ನಮ್ಮ ಆಸೆಯಲ್ಲಾ ಈಗ ಮಣ್ಣಾಯಿತಲ್ಲ ಮಣ್ಣಾಯಿತಲ್ಲ,
ಎಂದು ಹುಚ್ಚನಂತೆ ಆಡುತ್ತಿದ್ದ ಮಾವನಿಗೆ,
ಅಪ್ಪಾ ಯಾಕೆ ವ್ಯರ್ಥ ಆಯಿತು ಅಂತ ಅನ್ಕೊಳ್ತೀ...
ಪ್ರಸಾದದ ರೂಪದಲ್ಲಿ ಇವಳೊಳಗೂ ನಾವು ಆ ದುಷ್ಟ ಶಕ್ತಿಯನ್ನು ಇಳಿಸಿದ್ದೀವಿ,
ಸತ್ತ ಮಗುವಿನೊಂದಿಗೆ
ಈಗ ಇವಳನ್ನೇ ನರ ಬಲಿ ಕೊಡೋಣ....
ಆ ನಿಧಿಯನ್ನು ಪಡೆಯೋಣ..ಎಂದ ನನ್ನ ಗಂಡ..
ಹಾಗೆ ಮಾಡೋಣ ಎಂದು ಅತ್ತೆ ಅಡುಗೆ ಮನೆಗೆ ಹೋಗಿ ಚಾಕುಗಳನ್ನು ತಂದು ಮೂವರ ಕೈಗೂ ಕೊಟ್ಟರು, ಅದನ್ನು ಹಿಡಿದು ಅವರೆಲ್ಲರೂ ಹತ್ತಿರ ಬರುವಾಗ,
ನನ್ನ ಎದೆಯ ಬಡಿತ ಹೊರಗೆ ಕೇಳುವಂತೆ ಬಡಿದುಕೊಳ್ಳುತ್ತಿತ್ತು.
ಬೇಡಾ ಬೇಡಾ.. ನನ್ನ ಬಿಟ್ಟು ಬಿಡಿ ನಿಮ್ಮ ಕಾಲಿಗೆ ಬೀಳ್ತೀನಿ ಎಂದು,
ಅವರ ಕಾಲಿಗೆರೆಗಿದ ನನ್ನ ಜುಟ್ಟನ್ನು ಹಿಡಿದು ಮೇಲೆತ್ತಿ...
ಆಳಿಗೊಬ್ಬರು ಚಾಕುವಿನಿಂದ ಇರಿದುದರು....
ಇದೆ ಮನೆಯಲ್ಲಿ ಗುಂಡಿ ತೆಗೆದು, ಪ್ರಾಣ ಇನ್ನೂ ಹೋಗಿಲ್ಲವೆಂದು ಗೊತ್ತಿದ್ದರೂ
ನನ್ನನ್ನೂ ಜೀವಂತ ಹೂತು ಬಿಟ್ಟರು, ನನ್ನ ಕಾಲುಂಗುರ, ತಲೆ ಕೂದಲನ್ನು ತೆಗೆದುಕೊಂಡು, ಆ ನಿಧಿ ಇರುವ ಗವಿಯೊಳಗೆ ಹೋದವರು, ಹೊರಗೆ ಬರಲೇ ಇಲ್ಲಾ...
ಅಂದಿನಿಂದ ಇದೆ ನನ್ನ ಮನೆ ಇಲ್ಲೇ ನನ್ನ ವಾಸ....
ತನ್ನೊಳಗಿನ ವ್ಯಥೆಯ ವಿಸ್ತಾರವನ್ನು ಪ್ರಜಿನ್ ನ ಮುಂದಿಟ್ಟು,
ತಲೆಬಾಗಿ ಕೂತಳು ಕೆಂಪಾ....
ಒಂದೆರೆಡು ನಿಮಿಷದ ನಂತರ,ಮೌನವನ್ನು ಮುರಿದು,
ನಿನ್ನ ಕಥೆಯನ್ನು ಕೇಳಿ ಮನಸಿಗೆ ನೋವಾಯಿತು, ನಿನಗೆ ಮುಕ್ತಿ ಕೊಡಿಸ್ತೀನಿ,
ಇನ್ನು ನೀನಿಲ್ಲಿ ಇರಬಾರದು,
ಈ ತುಂಬಿದ ಹುಣ್ಣಿಮೆಯಲ್ಲಿ ಪ್ರಕೃತಿಯಲ್ಲಿ ಲೀನವಾಗಿ ಬಿಡು..
ಎಂದು ಅವನು ಹೇಳಿ ಮುಗಿಸಿದ ಮರುಕ್ಷಣ...
ಬಾಗಿದ್ದ ಕತ್ತನ್ನು ಮೆಲ್ಲನೆ ಮೇಲೆತ್ತಿ...
ಕೆಂಪಾದ ಕಣ್ಣುಗಳನ್ನು ಅಗಲಿಸಿ ನೋಡುತ್ತಾ..
ನೀನ್ ಯಾರೋ ಅದನ್ನ ಹೇಳಕ್ಕೆ....
ನಾನು ಹೇಳೋದು ಕೇಳು ಇಲ್ಲದಿದ್ದರೆ..
ಎಂದು ಮತ್ತೆ ಪದಗಳನ್ನು ಉಚ್ಚರಿಸಲು ಮುಂದಾಗುತ್ತಾ ಇದ್ದ ಹಾಗೆ,
ಸರಕ್ಕೆನೆ ಅವನ ಮುಂದೆ ಬಂದು ನಿಂತು ಕತ್ತನ್ನು ಬಲವಾಗಿ ಹಿಡಿದು
ಹಾಗೆ ಮೇಲೆತ್ತಿದಳು....ಅವನು ಪದಗಳನ್ನು ಹೇಳಲು ಮುಂದಾದಷ್ಟು
ಹಿಡಿತಾ ಮತ್ತಷ್ಟು ಬಿಗಿಯಾಗುತ್ತಿತ್ತು....ಅವನ ಕಣ್ಣ ಗುಡ್ಡೆಗಳು ಮೇಲಾಯಿತು,
ಹಿಡಿತಕ್ಕೆ ಸಿಲುಕಿ ಉಸಿರು ಕಟ್ಟುತ್ತಿತ್ತು...
ಇದು ನನ್ನ ಮನೆ...ಇಲ್ಲಿ ಯಾರಿಗೂ ಅವಕಾಶ ಇಲ್ಲಾ..
ಎಂದೇಳಿ ಅವನನ್ನು ಹಿಡಿದು ಎಸೆದಳು....
ಕಿಟಕಿಯ ಬಾಗಿಲನ್ನು ಒಡೆದುಕೊಂಡು ರಸ್ತೆಗೆ ಬಂದು ಬಿದ್ದ ಏಟಿಗೆ ಜ್ಞಾನತಪ್ಪಿತು....
ಸಮಯ ಮುಂಜಾನೆ ನಾಲಕ್ಕು.....
ಐದರ ಆಸುಪಾಸಿನಲ್ಲಿ ಅತ್ತ ಓಡಾಡುವವರು, ಅವನನ್ನು ಅಸ್ಪತ್ರೆಗೆ ಸೇರಿಸಿದರು...
ವಿಷಯ ತಿಳಿದು ಅಲ್ಲಿಗೆ ಸುದರ್ಶನು ಬಂದು ಡಾಕ್ಟರ್ ಬಳಿ ಮಾತಾಡಿದ...
ಸಮಯ ಮಧ್ಯಾಹ್ನ ಎರಡಾಯಿತು..ಅಲ್ಲಿಗೆ ಬಿಲ್ಡರ್ ವರ್ಧನೂ ಬಂದು...
ಮಲಗಿದ್ದ ಪ್ರಜಿನ್ ಪಕ್ಕದಲಿದ್ದ ಸುದರ್ಶನನ್ನು ಹೊರ ಕರೆದು...
ಹೇಗಿದ್ದಾರೆ ಈಗ?
ಡಾಕ್ಟರ್ ಕತ್ತಿನ ಭಾಗಕ್ಕೆ ಏಟು ಬಿದ್ದಿದೆ, ಹಾಗೂ ಕೆಳಗೆ ಬಿದ್ದ ರಬಸಕ್ಕೆ
ಬಲಗೈ ನ ಮೂಲೆಯೂ ಮುರಿದೆ ಕಾಲು ಸ್ವಲ್ಪ ದಿನ ಸಂಪೂರ್ಣವಾಗಿ ಊರಿ ನಡೆಯಕ್ಕೆ ಆಗಲ್ಲಾ.. ಜೀವಕ್ಕೇನೂ ಅಪಾಯ ಇಲ್ಲ... ಅಂದ್ರು..
ಹೌದಾ..ಅವನ ಹೆತ್ತವರು ಮಾಡಿರೋ ಪುಣ್ಯ ಉಳಿಸಿದೆ..
ಅವನಿಗೆ ಪ್ರಜ್ಞೆ ಬರುತ್ತಾ ಇದ್ದ ಹಾಗೆ ಇಲ್ಲಿ ಸ್ವಲ್ಪ ದಿನ ಇದ್ದು ಟ್ರೀಟ್ಮೆಂಟ್ ಮುಗಿಸಿಕೊಂಡು,
ಊರಿನ ಕಡೆ ಹೊರಡಕ್ಕೆ ಹೇಳು, ಆ ಮನೆಯಿಂದ ಜೀವಂತ ಬಂದಿದ್ದು ಇವನೊಬ್ಬನೇ,
ಇನ್ನೊಮ್ಮೆ ಅಂತಹ ದುಸಾಹಸಕ್ಕೆ ಕೈ ಹಾಕೋದು ಬೇಡ... ಅಂತ ವರ್ಧಾ ಹೇಳಿದ್ರು ಅಂತ ಹೇಳು.. ಎಂದು ಕೈಗೆ ಹತ್ತು ಸಾವಿರ ಕೊಟ್ಟು ಹೋದರು...
ಸಂಜೆ ಆರಕ್ಕೆ... ಮೆಲ್ಲನೆ ಕಣ್ಣು ತೆರೆದ ಪ್ರಜಿನ್..ಕೊರಳಿಗೆ ನೋವು ನಿವಾರಕ ಪಟ್ಟಿ,
ಕೈ ಕಾಲಿಗೆ ಬ್ಯಾಂಡೇಜ್ ಹಾಕಿದ್ದು ನೋಡುತ್ತಾ..ಪಕ್ಕದಲ್ಲಿ ಕುಳಿತಿದ್ದ ಸುದರ್ಶನನ್ನು ನೋಡಿದ...
ಹೇಗಿದ್ದೀಯೋ ಪ್ರಜಿನ್ ಈಗಾ?
ಎಂದು ಕೇಳಿದವನಿಗೆ..
ಸಣ್ಣದಾದ ದನಿಯಲ್ಲಿ..ಪರವಾಗಿಲ್ಲ ಕಣೋ...
ಅಬ್ಬಾ..ಈಗ ನನ್ನ ಜೀವ ಬಂತಪ್ಪ...
ಉಫ್ಫ್...ನಿನ್ ಎಷ್ಟೋ ಕೇಸ್ ಗಳನ್ನ ಅರಾಂಸೆ ಡೀಲ್ ಮಾಡಿದ್ದೀಯಲ್ಲ ಹಾಗೆ,
ಇದನ್ನು ಮಾಡ್ತೀಯೇನೋ ಅಂತ ಕರ್ದೆ ಕಣೋ.. ನೋಡಿದ್ರೆ ಇದು ನಿನ್ನನ್ನೇ
ಈ ಸ್ಥಿತಿಗೆ ತಂದಿದೆ ಅಂದ್ರೆ ಇದರ ಭಯಾನಕತೆ ಎಷ್ಟು ಅಂತ ಅರ್ಥವಾಗುತ್ತೆ...
ನಿನಗೆನಾದ್ರೂ ಹಾಗಿದ್ರೆ ನಿಮ್ಮ ತಂದೆ ನನ್ನ ಸುಮ್ನೆ ಬಿಡ್ತಾ ಇದ್ರಾನೋ..
ಅಬ್ಬಾ ನೆನಸ್ಕೊಂಡ್ರೆ ಭಯ ಆಗುತ್ತೆ...
ಭಯ ಬೇಡ ಕಣೋ..ಏನೂ ಆಗಲ್ಲಾ..ಎಂದು ಮೆಲ್ಲನೆ ಹೇಳಿ..ಪಕ್ಕದಲ್ಲಿ ಇದ್ದ ಅವನ ಕೈ ಹಿಡಿದ..
ಒಂದು ವಾರ ಕಳೆಯಿತು..ತಕ್ಕ ಮಟ್ಟಿಗೆ ಪ್ರಜಿನ್ ಸುಧಾರಿಸಿದ್ದ ಕಾರಣ..
ಸುದರ್ಶನ್ ಮನೆಗೆ ಕರೆದುಕೊಂಡು ಬಂದಾ..
ಅಲ್ಲಿಗೆ ಒಂದು ತಿಂಗಳು ಬೆಡ್ ರೆಸ್ಟ್ ನಲ್ಲಿದ್ದ ಪ್ರಜಿನ್..
ಒಂದು ದಿನ...
ಪ್ರಜಿನ್..ಇನ್ನೂ ಸ್ವಲ್ಪ ದಿನ ಇದ್ದು ನೀನು ಮೊದಲು ನಿಮ್ಮ ಮನೆಗೆ ಹೋಗಿ ಸೇರಪ್ಪ..
ಇನ್ನು ಇದೆಲ್ಲಾ ಬೇಡಾ..ನಿನ್ ಬದುಕಿ ಬಂದಿದ್ದೆ ನಿಜಾ ನಿನ್ನ ಹೆತ್ತವರ ಪುಣ್ಯಾನೆ ವರ್ಧಾ ಹೇಳಿದ ಹಾಗೆ...
ಅದಕ್ಕೆ ಪ್ರಜಿನ್..
ಆಗದು ಎನ್ನುವಂತೆ ತಲೆಯಾಡಿಸುತ್ತಾ...
ಮುಂದಿಟ್ಟ ಹೆಜ್ಜೆಯನ್ನು ಹಿಂದಿಡುವ ಪ್ರಶ್ನೆಯೇ ಇಲ್ಲಾ..
ಎನ್ನುವ ಅವನ ದನಿಯಲ್ಲಿ ಅಳುಗಡಿಸಲು ಸಾಧ್ಯವಿಲ್ಲದಂತ ದೃಢತೆ ಇತ್ತು..
ಲೋ ..ಹೇಳೋದನ್ನ ಕೇಳು ನಿನಗೆ ಸಾವಿರ ಸಲ ಹೇಳಿದ್ದೀನಿ.
ಅಲ್ಲಿಂದ ಉಳಿದು ಬಂದ ಉದಾಹರಣೆಯೇ ಇಲ್ಲಾ, ಹೀಗೋ ನೀ ಬಂದೆ.
ಸುಮ್ನೆ ಮನೆ ಕಡೆ ಹೊರಡು ಮಗ..ಯಾವುದಾದರೂ ಸಣ್ಣ ಪುಟ್ಟ ಕೇಸ್ ಡೀಲ್ ಮಾಡಬಹುದು, ಇದು ಯಾಕೋ ಸಕ್ಕತ್ ಡೇಂಜರ್ ಅನ್ನಿಸುತ್ತಾ ಇದೆ...
ನೋಡೋ..ಸುದರ್ಶನ್ ..ಯಾರ್ ಏನೇ ಹೇಳಲಿ.ಅದೇನೇ ಅಗಲಿ ನಾನು ಮತ್ತೆ ಹೋಗೆ ಹೋಗ್ತೀನಿ.. ಒಂದು ನಾನು ಇಲ್ಲಾ ಆ ಪ್ರೇತಾತ್ಮ..ನೋಡೇ ಬಿಡ್ತೀನಿ...
ನಿನ್ ಮತ್ತೆ ಮತ್ತೆ ಇದೆ ವಿಷಯ ಹೇಳಬೇಡ...
ಎಂದವನಿಗೆ ಇನ್ನೂ ಏನ್ ಹೇಳಿದರೂ ಪ್ರಯೋಜನವಿಲ್ಲವೆಂದು ಸುಮ್ಮನಾದ ಸುದರ್ಶನ್..
ಅದೊಂದು ದಿನ ಮಧ್ಯಾಹ್ನ.. ರೂಮ್ ನಲ್ಲಿ ಸುದರ್ಶನ್ ಇದ್ದಾಗ,
ಪ್ರಜಿನ್ ನನ ಮೊಬೈಲ್ ಬಡಿದುಕೊಳ್ಳಲು ಶುರು ಮಾಡಿತು..
ಅವನು ಸ್ನಾನಕ್ಕೆ ಹೋಗಿದ್ದ... ಸರಿ ಯಾರೆಂದು ನೋಡೋಣವೆಂದು..
ಮೊಬೈಲ್ ತೆಗೆದು ನೋಡಿದರೆ..
ಪ್ರಜಿನ್ನ ತಂದೆಯ ಕರೆಯಾಗಿತ್ತು...
ಸ್ವೀಕರಿಸಿ ಮಾತಾಡಿದ...
ಹಲೋ...ಸರ್ ನಾನು ಸುದರ್ಶನ್ .ಪ್ರಜಿನ್ ಫ್ರೆಂಡ್....
ಹಲೋ ಸುದರ್ಶನ್..ಅವನು ನಿನ್ನ ಜೊತೆ ಇದ್ದಾನ..
ಎಲ್ಲಿದ್ದೀರಾ ಇಬ್ಬರೂ? ನಮ್ಮೂರಲ್ಲೇ ಅಂಕಲ್..
ಏನು ನಿಮ್ಮೂರಲ್ಲಾ? ನೋಡಪ್ಪ ಅವನು ಎಲ್ಲಿದ್ದಾನೆ ಏನು ಅಂತ ನನಗೆ ಹೇಳೋದೇ ಇಲ್ಲಾ, ಮೈಸೂರ್ ನಲ್ಲಿ ಒಂದು ಕೇಸ್ ಅಂದ ಅದಾದ ಮೇಲೆ ಅಲ್ಲಿಂದ ಸ್ವಲ್ಪ ಪಕ್ಕದಲ್ಲೇ ಇನ್ನೊಂದು ಕೇಸ್ ಇದೆ ಮುಗಿಸಿಕೊಂಡು ಬೇಗಾ ಬಂದು ಬಿಡ್ತೀನಿ ಅಂತ ಹೇಳಿದವನು..
ಈ ಒಂದು ತಿಂಗಳಿನಿಂದ.ಆಗೊಂದು ಈಗೊಂದು ಕಾಲ್ ಮಾಡ್ತಾ ಇದ್ದಾನೆ ಅದು ಸರಿಯಾಗಿ ಮಾತಾಡೋದು ಇಲ್ಲಾ ಕೇಳಿದ್ರೆ ಜ್ವರ ಹುಷಾರ್ ಇಲ್ಲ ಅಂದ..
ಈಗ ಹೇಗಿದ್ದಾನಪ್ಪ? ಎಲ್ಲೋಗಿದ್ದಾನೆ?
ಅಂಕಲ್ ಅವನು ಸ್ನಾನಕ್ಕೆ ಹೋಗಿದ್ದಾನೆ..ಎಂದು ಹೇಳಿ..
ಪ್ರಜಿನ್ ಇವರಿಗೆ ನಡೆದ ಯಾವ ವಿಷಯವನ್ನು ಹೇಳಿಲ್ಲಾ,
ಎಂದು ಅರ್ಥಮಾಡಿಕೊಂಡು, ಇವರಿಗೆ ಹೇಳಿದ್ರೆ ಇವರಾದರೂ ಬಂದು
ಕರೆದುಕೊಂಡು ಹೋಗಬಹುದು ಎಂದು ಒಂದು ಕ್ಷಣ ಯೋಚಿಸಿ....
ಅಂಕಲ್ ನಿಮಗೊಂದು ಮಾತು ಹೇಳ್ತೀನಿ ನೀವು ಗಾಬರಿ ಆಗಬಾರದು
ಎಂದೇಳಿ, ನಡೆದ ಎಲ್ಲವನ್ನೂ ಹೇಳಿದ..
ಏನಪ್ಪಾ ಇಷ್ಟೆಲ್ಲಾ ಆಗಿದೆ, ನನಗೆ ಒಂದು ಮಾತೂ ಹೇಳಿಲ್ಲಾ, ಅವನು
ಏನ್ ಅನ್ಕೊಂಡು ಇದ್ದಾನೆ ಅವನು ಅವರಪ್ಪಾ ಇದ್ದಾನೆ ಇಲ್ಲಾ ಸತ್ತೋಗಿದ್ದಾನೆ ಅಂತ ತಿಳ್ಕೊಂಡು ಇದ್ದಾನ..ಎಲ್ಲಿ ಅವನ ಕೈಗೆ ಫೋನ್ ಕೊಡು....
ಅಂಕಲ್ ಅಂಕಲ್..ಈಗ ಬೇಡ..ನಾನ್ ಇಲ್ಲೇ ಇರ್ತೀನಿ ನಾನೇ ಹೇಳ್ದ ಅಂತ ಬೈತಾನೆ,
ನಿಮ್ಮ ಜೊತೆ ಸರಿಯಾಗಿಯೂ ಮಾತಾಡಲ್ಲ..ರಾತ್ರಿ ಹತ್ತಕ್ಕೆ ಮಾಡಿ ಮಾತಾಡಿ..
ಎಂದ..
ಆಗಲಿ ಹಾಗೆ ಮಾಡ್ತೀನಿ ಎಂದೇಳಿ
ರಾತ್ರಿ ಹತ್ತಕ್ಕೆ ಕರೆ ಮಾಡಿದ್ರು....
ಹಲೋ ಅಪ್ಪಾ ಹೇಗಿದ್ದೀಯಾ?
ಏನಪ್ಪಾ ನಾನು ಇನ್ನೂ ಇದ್ದೀನಿ ಅನ್ನೋ ನೆನಪು ಇದೆಯಾ ನಿನಗೆ?
ಅಯ್ಯೋ ಯಾಕಪ್ಪ ಹಾಗೆಲ್ಲಾ ಮಾತಾಡ್ತೀ?
ಮತ್ತೇನು ಕೇಸ್ ನೋಡಕ್ಕೆ ಹೋಗಿದ್ದ ಜಾಗದಲ್ಲಿ ನಿನಗೆ ಅಷ್ಟೆಲ್ಲಾ ಆಗಿದೆ
ನನಗೆ ಒಂದು ಮಾತು ಹೇಳಬೇಕು ಅಂತ ಅನ್ನಿಸಲಿಲ್ಲವೇ ನಿನಗೆ...
ಒಹ್ ವಿಷಯವನ್ನು ಸುದರ್ಶನ್ ಹೇಳಿದ್ದಾನೆ ಎಂದು ಗೊತ್ತಾಗಿ..
ಅಪ್ಪಾ ಹೇಳಬಾರದು ಅಂತ ಏನಿಲ್ಲಾ..ಸುಮ್ನೆ ನೀನು ಗಾಬರಿ ಆಗ್ತೀಯಾ ಅದಕ್ಕೆ ಹೇಳಿಲ್ಲಾ..ನನಗೇನೂ ಆಗಿಲ್ಲಾ ಗಟ್ಟಿಯಾಗಿದ್ದೀನಿ,
ಏನೋ ಈಗ ಅದೆಲ್ಲಾ ಬೇಡ..ಈ ಕ್ಷಣವೇ ನೀನು ಹೊರಟು ಬರಬೇಕು..ಅಷ್ಟೇ..
ಬೇಕಿದ್ದರೆ ನಾನೇ ಬಂದು ಕರ್ಕೊಂಡು ಬರ್ತೀನಿ...
ಅವನು ಯೋಚಿಸುತ್ತಾ ಇದ್ದು...
ಇಲ್ಲಪ್ಪ ದಯವಿಟ್ಟು ಕ್ಷಮಿಸಿ ಬಿಡಿ...ಈ ಒಂದು ಸಲ ನನಗೆ ಫೋರ್ಸ್ ಮಾಡಬೇಡಿ..
ನಾನು ಹಿಡಿದ ಕೆಲಸವನ್ನು ಮಾಡಿಯೇ ಬರೋದು...
ಏನಪ್ಪಾ ನಿನಗೆ ತಂದೆಯಾ ಮಾತಿಗಿಂತ ಅದುವೇ ಹೆಚ್ಚಾಯಿತಾ..
ಅಥವಾ ದೊಡ್ಡ ಮೊತ್ತದ ಕೇಸ್ ಅಂತ ಏನಾದರೂ ಯೋಚಿಸುತ್ತಾ ಇದ್ದೀಯಾ..
ಅಪ್ಪಾ ನನಗೆ ಹಣ ಮುಖ್ಯ ಅಲ್ಲಾ..
ನಿಮ್ಮ ಮಾತನ್ನು ವಿರೋಧಿಸಬೇಕು ಅಂತಾನೂ ಇಲ್ಲಾ..
ಆ ಪ್ರೇತಾತ್ಮಕ್ಕೆ ಬಹಳ ಹಿಂಸೆ ಕೊಟ್ಟು ಕೊಂದಿದ್ದಾರೆ, ಈಗದು ಅತೃಪ್ತವಾಗಿ ಅಲೆದಾಡುತ್ತಾ ಇದೆ, ಅದಕ್ಕೆ ನಾನು ಮುಕ್ತಿಕೊಡಿಸಿ ಪ್ರಕೃತಿಯಲ್ಲಿ ಲೀನವಾಗಿಸದೆ,
ಬರಬಾರದು ಅಂತ ಇದ್ದೀನಿ...
ನಿಮ್ಮ ಮನಸಿಗೆ ಇಷ್ಟು ಕಾಡಿರೋದು ಅಂತದ್ದು ಆ ಆತ್ಮಕ್ಕೆ ಏನಪ್ಪಾ ಆಯಿತು...
ಎಂದವರಿಗೆ ಕೆಂಪಾಳ ಕಥೆಯನ್ನು ಸಂಪೂರ್ಣವಾಗಿ ಹೇಳಿ ಮುಗಿಸಿದ...
ಅದನ್ನು ಕೇಳಿ ಅವರ ಕೋಪವು ಕರಗಿ..ಕನಿಕರ ಹುಟ್ಟಿತು
ಜಿನುಗಿದ ಕಂಬನಿಯನ್ನು ಒರಸಿಕೊಂಡು...
ಸರಿ ಕಣಪ್ಪ ಮೊದಲ ಬಾರಿಗೆ ಈ ಕೇಸ್ ಗೆ ನಾನೂ ನಿನಗೆ ಸಹಾಯ ಮಾಡ್ತೀನಿ..
ಎನ್ನುವ ಮಾತು ಕೇಳಿ ಅವನಿಗೆ ಆಶ್ಚರ್ಯವಾಯಿತು...
ನೀನಾ? ನೀನು ಹೇಗಪ್ಪಾ ನನಗೆ ಸಹಾಯ ಮಾಡಕ್ಕೆ ಆಗುತ್ತೆ?
ಏನಪ್ಪಾ ಮಾಡೋದು.ಮಕ್ಕಳಿಗೆ ಹೆತ್ತವರು ಒಂದು ಗಾಯವಾಗಬಾರದು ಅಂತ
ಸೈಕಲ್ ಕಲಿಯುವಾಗ ಹಿಂದೆಯೇ ಓಡಿ ಬರಲ್ವಾ? ಹಾಗೆ,
ಯಾವತ್ತು ನೀನು ಈ ಪ್ರೇತಾತ್ಮಗಳ ವಿಷಯಕ್ಕೆ ಕಾಲಿಟ್ಟೋ,
ಅವತ್ತೇ ನಿನಗೆ ಯಾವತ್ತಾದರೂ ಯಾವುದಾದರೂ ದುಷ್ಟಾತ್ಮದಿಂದ ಏನಾದರೂ ಒಂದು ಆದ್ರೆ ಇರಲಿ ಅಂತ, ದೊಡ್ಡ ದೊಡ್ಡ ಮಂತ್ರವಾದಿಗಳನ್ನ, ದೆವ್ವ ಬಿಡಿಸುವವರನ್ನ,
ಪರಿಚಯ ಮಾಡಿ ಇಟ್ಕೊಂಡು ಇದ್ದೀನಿ.. ನನಗೆ ಎರಡೇ ದಿನ ಸಮಯ ಕೊಡು ಅವರ ಬಳಿಗೆ ಹೋಗಿ.. ಈ ವಿಷಯ ಕೇಳಿ ಏನು ಎತ್ತಾ ಅಂತ ಕೇಳಿಕೊಂಡು ಬಂದು ನಿನಗೆ ಹೇಳ್ತೀನಿ..
ಸರಿ ಅಪ್ಪ..ನಿನ್ ಹೇಳೋ ಹಾಗೆ ಕೇಳ್ತೀನಿ...
ಎಂದೇಳಿದ..
ಎರಡು ದಿನಗಳ ನಂತರ ಪ್ರಜಿನ್ ತಂದೆ ಕರೆ ಮಾಡಿ..
ಪ್ರಜಿನ್ ಅವರನ್ನೆಲ್ಲಾ ನೋಡಿ ಮಾತಾಡಿ ಬಂದೆ,
ಆ ಪ್ರೇತಾತ್ಮ ನ ಹೇಗೆ ಎದುರಿಸೋದು ಅಂತ ತಿಳೀತು,
ಹೇಗಪ್ಪಾ? ಎಂದವನ ದನಿಯಲ್ಲಿ ಕಾತುರತೆಯಿತ್ತು...
ಈ ಜಗತ್ತಿನ ಯಾವುದೇ ಶಕ್ತಿಯನ್ನೂ ಸೋಲಿಸುವ ಒಂದು ಮಂತ್ರವಿದೆ..
ಹೌದಾ ಯಾವ ಮಂತ್ರಪ ಅದು?
ಅದೆಲ್ಲಾ ನಿನಗೆ ಫೋನ್ ನಲ್ಲಿ ಹೇಳಕ್ಕೆ ಆಗಲ್ಲಾ ನೇರವಾಗಿ ಬಂದು ಹೇಳ್ತೀನಿ..
ಎಂದು ಹೇಳಿ ಅಲ್ಲಿಂದ ಹೊರಟು ಪ್ರಜಿನ್ ರೂಂ ಗೆ ಬರುವಾಗ
ಸಮಯ ಸಂಜೆ ನಾಲಕ್ಕಾಗಿತ್ತು...
ಕಾಯುತ್ತಾ ಇದ್ದ ಪ್ರಜಿನ್ ನ ಕರೆದುಕೊಂಡು ಹೋಗಿ..
ರೂಮ್ ನ ಕಿಟಕಿಯನ್ನು ಮುಚ್ಚಿ ಬಾಗಿಲು ಹಾಕಿಕೊಂಡು...
ಏನು ಮಾಡಬೇಕು ಎನ್ನುವುದನ್ನು ಅವನ ಎದೆಯ ಮೇಲೆ ಕೈ ಇಟ್ಟು ಹೇಳುತ್ತಿದ್ದರು,
ಧ್ಯಾನದ ಸ್ಥಿತಿಯಲ್ಲಿ ಅವನು ಅವರ ಒಂದೊಂದು ಮಾತುಗಳನ್ನು ನಂಬಲಾಸಧ್ಯವೆನ್ನುವಂತೆ ಮುಖವನ್ನು ಚಹರೆಯಲ್ಲಿ ಕೇಳಿಸಿಕೊಳ್ಳುತ್ತಿದ್ದ...
ಸಮಯ ರಾತ್ರಿ ಹನ್ನೊಂದೂವರೆ...
ನಾನು ಹೇಳಿದ ಎಲ್ಲವನ್ನು ನೆನಪಿನಲ್ಲಿ ಇಟ್ಕೋ ಪ್ರಜಿನ್..
ಒಂದೇ ಒಂದು ಕ್ಷಣವೂ ಎಮಾರ ಬೇಡ.. ತುಂಬಾ ಜಾಗೃತವಾಗಿರಲಿ ಚಿತ್ತ..
ಇವತ್ತು ತುಂಬಿದ ಅಪರೂಪದ ಹುಣ್ಣಿಮೆ.. ಇವತ್ತೇ ನಾವಿಬ್ಬರೂ ಅಲ್ಲಿಗೆ ಹೋಗೋಣ..
ಬಾ ಎಂದು ಆ ಮನೆಯ ಮುಂದೆ ಬಂದು ನಿಂತರು.....
ನಾನು ಇಲ್ಲೇ ಇರ್ತೀನಿ, ನೀನು ಒಳಗೆ ಹೋಗು, ನಾನ್ ಹೇಳಿದೆಲ್ಲವೂ ನೆನಪಿರಲಿ.
ಎನ್ನುತ್ತಾ ಕೈಗೆ ಒಂದು ಟಾರ್ಚ್ ಕೊಟ್ಟು ಕಳುಹಿಸಿದರು ಅದರಂತೆ ಅವನು ಒಳ ಹೋದ...
ಹಿಂದೆ ಹಾಕಿದ್ದ ವೃತ್ತಾಕಾರದ ಮುಂದೆ ನಿಂತು,
ಕೆಂಪಾ ಎಂದು ಕೂಗಿದ...ಯಾವ ಸುಳಿವೂ ಇಲ್ಲಾ..
ಕೊರಳಿಗೆ ಹಾಕಿದ್ದ ಪಟ್ಟಿಯನ್ನು ಕಿತ್ತೆಸೆದು ಮತ್ತೊಮ್ಮೆ ಜೋರಾಗಿ
ಕೆಂಪಾ..ಎಂದು ಅರಚಿದ... ಚಂದಿರನ ಬೆಳದಿಂಗಳು ಚಾವಣಿಯಿಂದ ಇಳಿಯುವಲ್ಲಿ
ಹೊಗೆಯಾಡುತ್ತ ಇದ್ದ ಹಾಗೆ,
ಕತ್ತಲಿನೊಳಗಿನಿಂದ ಮತ್ತದೇ ಆಕೃತಿ ಹೊರ ಬಂದು ನಿಂತಿತು...
ನೀನ್ ಇನ್ನೂ ಬದುಕಿದ್ದೀಯಾ? ಇಲ್ಲಿಗೆ ಮತ್ತೊಮೆ ಉಳಿದು ಬಂದಿದ್ದು ನೀನೊಬ್ಬನೇ..
ನಾನ್ ಹೇಳೋದು ಕೇಳು..ಎಂದವನ ಮಾತು ಮುಂದುವರಿಯುವ ಮುನ್ನವೇ..
ಅವನ ಕತ್ತನ್ನು ಹಿಡಿದು ಮೂರಡಿ ಮೇಲಕ್ಕೆ ಎತ್ತಿದಳು....
ಮೊದಲೇ ಇದ್ದ ನೋವಿನ ಮೇಲೆ ಮತ್ತಷ್ಟು ಒತ್ತಡ ಬೀಳುತ್ತಿದ್ದರೂ,
ಅವನು ಸುಧಾರಿಸಿಕೊಂಡು ಅವಳ ಕಿವಿಯಲಿ ಮೆಲ್ಲನೆ ಆ ಅದ್ಭುತ ಶಕ್ತಿಯ ಮಂತ್ರವನ್ನು ಹೇಳಿದ..
ಅದನ್ನು ಕೇಳಿ ಅವಳಿಗೆ, ಒಂದು ಕ್ಷಣ ಸಿಡಿಲು ಸಿಡಿದಂತೆ ಆಗಿ,
ಹಿಡಿತವನ್ನು ಮತ್ತಷ್ಟು ಬಲಗೊಳಿಸಿದಳು, ಅವನು ತನ್ನ ಎಡಗೈಯನ್ನು ಮೆಲ್ಲನೆ
ಕೊರಳಿನವರೆಗೂ ತಂದು. ಧರಿಸಿದ್ದ ಶರಟನ್ನು ಹರಿದು, ಎದೆಯನ್ನು ತೋರಿಸಿದ..
ಅದನ್ನು ನೋಡುತ್ತಾ ಇದ್ದ ಹಾಗೆ, ಗಾಳಿಯ ಸಿಳುವಂತೆ, ಕಿರುಚಿ ಹಿಡಿದಿದ್ದ ಹಿಡಿತವನ್ನು ಬಿಟ್ಟಳು, ಅವನು ಕೆಳಗೆ ಬಿದ್ದ..ಅವಳು ಆ ವೃತ್ತಾಕಾರದಲ್ಲಿ ಕೂತಳು...
ಜಗತ್ತಿನ ಎಲ್ಲಾ ಶಕ್ತಿಗಳನ್ನು ಸೋಲಿಸುವ ಆ ಮಂತ್ರವೇ...ಅಮ್ಮಾ...
ದಿಗಿಲು ಬಡಿದಂತೆ ಕೂತವಳಿಗೆ, ಹೌದಮ್ಮಾ..
ನಾನೇ ನಿನ್ನ ಮಗ...
ಇಲ್ಲಾ ಇಲ್ಲಾ ನನ್ನ ಮಗು ಸತ್ತೋಯಿತು, ನೀನು ಹೇಳೋದು ಸುಳ್ಳು..
ಎಂದು ಕಿರುಚಿದಳು...
ಅಪ್ಪಾ ಬನ್ನಿ ಒಳಗೆ ಎಂದು ಪ್ರಜಿನ್ ತನ್ನ ತಂದೆಯನ್ನು ಕರೆದ,
ಬಾಗಿಲನ್ನು ತೆರೆದು ಒಳ ಬರುತ್ತಾ ಇದ್ದ ಹಾಗೆ ಎದುರಿನಲ್ಲಿ, ನೋಡಿದರೆ ಎದೆ ಸಿಡಿದು ಸಾಯುವಂತೆ ಅಘೋರವಾಗಿದ್ದ ಆಕೃತಿಯನ್ನು ಕಂಡು ಹೆದರದೆ ಮುಂದೆ ಬಂದು ನಿಂತು ಕೈ ಮುಗಿದು... ಹೌದಮ್ಮಾ ಪ್ರಜಿನ್ ಹೇಳೋದು ನಿಜಾ ಅವನು ನಿಮ್ಮ ಮಗಾನೆ..
ಇದೆ ಊರಿನ ಸರ್ಕಾರೀ ಆಸ್ಪತ್ರೆಯಲ್ಲಿಯೇ ನನ್ನ ಹೆಂಡತಿಯನ್ನು ಹೆರಿಗೆ ನೋವು ಕಾಣಿಸಿಕೊಂಡಿತು ಅಂತ ಸೇರಿಸಿದೆ, ಅವಳಿಗೆ ಅದಾಗಲೇ ಕಾಯಿಲೆ ಬಲವಾಗಿ ಕಾಡುತ್ತಿದ್ದ ಕಾರಣ, ನಮಗೆ ಮಗು ಇರಲಿಲ್ಲಾ. ನಿಂತ ಮಗು ಅಬಾರ್ಶನ್ ಆಗಿ ಬಿಡೋದು,
ಕೊನೆಗೆ ಹೇಗೋ ಒಂದು ಮಗು ಹುಟ್ಟುತ್ತೆ ... ಬಹಳ ಆಸೆಯಿಂದ ಇದ್ಲು.
ನಮ್ಮ ದುರದೃಷ್ಟ, ಮಗು ಸತ್ತೆ ಹುಟ್ಟಿತು, ಪ್ರಜ್ಞೆ ಬಂದ ನನ್ನ ಹೆಂಡತಿ,
ಎಲ್ಲಿ ನನ್ನ ಮಗು ಅಂತ ಕೇಳುವಾಗ ನಾನು ಏನ್ ಹೇಳೋದು ಅಂತ ತಿಳಿಯದೆ ಸುಮ್ಮನೆಯೇ ಇದ್ದದ್ದನ್ನು ನೋಡಿ ಅವಳಿಗೆ ಭಯ ಶುರುವಾಯಿತು. ಅವಳ ಉಸಿರಾಟದ ತೊಂದರೆ ಕಾಣಿಸಿಕೊಂಡು. ಮೇಲುಸಿರು ಕೆಳಗಿಸಿರು ಬಿಡುತ್ತಾ,
ಎಲ್ಲಿ ನನ್ನ ಮಗು ಎಲ್ಲಿ ಎಂದು ಕೇಳುತ್ತಲೇ ಇದ್ದಳು,
ನರ್ಸ್ ಮಗುನ ಕ್ಲೀನ್ ಮಾಡಕ್ಕೆ ತಗೊಂಡು ಹೋಗಿದ್ದಾರೆ, ಇರು ತಗೊಂಡು ಬರ್ತೀನಿ ಅಂತ ಬಂದು, ಸತ್ತ ಕಂದನ ದೇಹವನ್ನು ಕೈಯಲ್ಲಿ ಹಿಡಿದು ಹೇಗಪ್ಪ ಅವಳ ಮುಂದೆ ಹೋಗಿ ನಿಲ್ಲೋದು ಎನ್ನುವ ಭಯದಿಂದಲೇ ಒಂದೊಂದು ಹೆಜ್ಜೆ ಇಡುತ್ತಿದ್ದೆ,
ಅಲ್ಲಿ ಒಂದು ವಾರ್ಡ್’ನಲ್ಲಿ ಮಲಗಿದ್ದ ನಿಮ್ಮ ಪಕ್ಕದಲ್ಲಿ ಆಗಷ್ಟೇ ಹುಟ್ಟಿದ ಜನಜಾತ ಶಿಶು ಇತ್ತು, ಇನೇನು ಕೆಲವೇ ಕ್ಷಣದಲ್ಲಿ ಸಾಯುವ ಹೆಂಡತಿ ಕೊನೆ ಕ್ಷಣವಾದರೂ ಸಂತೋಷವಾಗಿರಲಿ ಎಂದು ಯೋಚಿಸಿ,
ಅಲ್ಲಿ ಬಂದೇ, ನಿಮ್ಮನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲಾ..
ನನ್ನ ಮಗುವನ್ನು ನಿಮ್ಮ ಪಕ್ಕ ಮಲಗಿಸಿ ನಿಮ್ಮ ಮಗುವನ್ನು ತೆಗೆದುಕೊಂಡೆ,
ಆಣೆ ಮಾಡಿ ಹೇಳ್ತೀನಿ ನನಗೆ ಕದಿಯುವ ಉದ್ದೇಶವಿರಲಿಲ್ಲ, ನನ್ನ ಹೆಂಡತಿಗೆ ತೋರಿಸಿ ಮತ್ತೆ ತಂದು ಇಡೋಣ ಅಂತಲೇ ತೆಗೆದುಕೊಂಡು ಹೋದೆ,
ನನ್ನ ಹೆಂಡತಿಗೆ ತೋರಿಸಿದೆ, ಅವಳು ನೋಡಿ ಜೀವನದಲ್ಲಿ ಹಿಂದೆಂದೂ ಪಡದ ಆನಂದವನ್ನು ಪಟ್ಟಳು, ಆ ಖುಷಿಯಲ್ಲಿಯೇ ಅವಳು ಕಣ್ಣು ಮುಚ್ಚಿ ಬಿಟ್ಟಳು,
ಪ್ರಾಣವೇ ಆಗಿದ್ದ ಹೆಂಡತಿಯ ಸಾವಿನಲ್ಲಿ ನನಗೆ ಮಗುವಿನ ವಿಷಯ ಮರೆತೇ ಹೋಯಿತು, ನಾನು ಸಹಜ ಸ್ಥಿತಿಗೆ ಬರುವಾಗ ಅದಾಗಲೇ ಮಗುವನ್ನು ತಂದು ಎರಡು ಗಂಟೆ ಆಗಿತ್ತು, ಕೂಡಲೇ ಮಗುವನ್ನು ಎತ್ತಿಕೊಂಡು ನೀವು ಇದ್ದ ವಾರ್ಡ್ ಗೆ ಬಂದೆ..
ಅಲ್ಲಿ ನೀವು ಇರಲಿಲ್ಲಾ..ಆಸ್ಪತ್ರೆಯಲ್ಲಿ ಏನನ್ನೂ ಹೇಳದೆ, ತಿಳಿದವರು ಅವರನ್ನು ನೋಡಬೇಕಿತ್ತು, ಎಂದು ನಿಮ್ಮ ವಿಳಾಸವನ್ನು ತೆಗೆದುಕೊಂಡು ಮಾರನೆಯ ದಿನ ಬೆಳಗ್ಗೆಯೇ ನನ್ನ ಹೆಂಡತಿಯ ಶವವನ್ನು ಬಿಟ್ಟು, ನಿಮ್ಮ ಮನೆಯ ಮುಂದೆ ಬಂದೆ,
ಮನೆ ಬೀಗ ಹಾಕಿತ್ತು...
ಸರಿ ಅಲ್ಲೇ ನನ್ನ ಹೆಂಡತಿಯ ತವರೂರು ಅವಳಿಗೆ ಮಾಡಬೇಕಾದ ವಿಧಿವಿಧಾನಗಳನ್ನೂ ಮಾಡಿ, ನಿಮ್ಮ ಮನೆಯನ್ನು ಮತ್ತೊಮ್ಮೆ ಬಂದು ನೋಡಿದ ಆಗಲೂ ಬೀಗ ಹಾಕಿಯೇ ಇತ್ತು, ನಂತರ ಅಲ್ಲೇ ದೂರದಲ್ಲಿ ಇದ್ದ ಒಂದು ಗವಿಯಲ್ಲಿ ಮೂವರು ನಿಧಿ ಆಸೆಗಾಗಿ ಹೋಗಿ ಸತ್ತಿದ್ದಾರೆ ಅನ್ನೋ ಸುದ್ದಿ ತಿಳಿಯಿತು, ಅದು ಪ್ರಜಿನ್ ನ ತಂದೆ ಅಂತ ಹೆಸರು ನೋಡಿ ಅರ್ಥ ಮಾಡಿಕೊಂಡೆ, ಅಲ್ಲಿಂದ ಪ್ರಜಿನ್ ನ ನನ್ನ ಸ್ವಂತ ಮಗನ ಹಾಗೆ ಸಾಕಿದ್ದೀನಿ, ಅವನಿಗೆ ಒಳ್ಳೆಯ ವಿದ್ಯಾಭ್ಯಾಸ ಮಾಡಿಸಿದೆ, ಲಕ್ಷ ಲಕ್ಷ ಹಾಕಿ ಬಿಸ್ನೆಸ್ ಮಾಡಿಕೊಟ್ಟೆ, ಅದರೂ ಅವನನ್ನು ಸಂಪೂರ್ಣ ಈ ದೆವ್ವ, ಪ್ರೇತ ಅನ್ನೋ ವಿಷಯದಿಂದ ನನ್ನಿಂದ ದೂರ ಇಡಕ್ಕೆ ಅಗಲಿಲ್ಲಾ, ಕಾರಣ ಅದು ಅವನ ರಕ್ತದಲ್ಲಿ ಬಂದಿರೋದರಿಂದ,
ಅದನ್ನು ಬಲವಂತವಾಗಿ ತಡೆಯುವ ಯತ್ನ ನಾನೆಂದೂ ಮಾಡಲಿಲ್ಲ..
ಹಾಗೆ ಅವನ ಎದೆಯ ಮೇಲೆ ಒಂದು ರೂಪಾಯಿ ನಾಣ್ಯದಷ್ಟು ಗಾತ್ರದ ಮಚ್ಚೆ ಇತ್ತು,
ಅದನ್ನು ನೋಡಿದ ಕೆಲವರು ಅದು ಸಾಮಾನ್ಯ ಮಚ್ಚೆ ಅಲ್ಲಾ,
ವಂಶಪಾರಂಪರ್ಯವಾಗಿ ಬರುವಂತದು ಅಂತ ಹೇಳಿದ್ದರು,
ಅದಕ್ಕೆ ಅದನ್ನು ನಿಮಗೆ ತೋರಿಸಿ ಎಂದೇಳಿದ್ದೆ,
ಒಂದೇ ಸಮನೆ ಎಲ್ಲವನ್ನೂ ಹೇಳಿ ಮುಗಿಸಿದರು....
ಪ್ರೇತಾತ್ಮವೆ ಅದರೂ ಅವಳು ಸಹ ಹೆಣ್ಣೇ, ಅವಳ ಕಣ್ಣುಗಳಲ್ಲಿನ ಕ್ರೋದ ಇಳಿದು,
ಕಂಬನಿ ತುಂಬಿತ್ತು, ಹಾಗೆ ಪ್ರಜಿನ್ ನ ಹತ್ತಿರ ಬಂದು, ಅವನ ಕೈಯಲಿನ ಬ್ಯಾಂಡೇಜ್ ನ ಮುಟ್ಟಿ,
ನನ್ನ ಕಂದನಿಗೆ ನಾನೇ ನೋವು ಮಾಡಿ ಬಿಟ್ನಲ್ಲ, ಎಂದು ಮರಗಿದಳು,
ಈ ಪಿಶಾಚಿ ತಾಯಿಯನ್ನು ಕ್ಷಮಿಸಿ ಬಿಡು ಕಂದಾ ಎನ್ನುತ್ತಾ ಕೈ ಮುಗಿದ
ಅವಳ ಕೈಯನ್ನು ಹಿಡಿದು,
ಅಲ್ಲಿಯವರೆಗೂ ಹಿಡಿತದಲ್ಲಿ ಇದ್ದ ಪ್ರಜಿನ್ ನ ದುಃಖದ ಕಡಲು ಒಡೆಯಿತು,
ಅಯ್ಯೋ ಅಮ್ಮಾ ಅಮ್ಮಾ...ನಿನ್ನ ಈ ಸ್ಥಿತಿಯಲ್ಲಿ ನೋಡಕ್ಕೆ ಅಂತಾನೆ ನಾ
ನಾನು ಈ ಮಾರ್ಗವನ್ನು ಆಯ್ದುಕೊಂಡಿದ್ದು, ಅಯ್ಯೋ.. ಅಮ್ಮಾ....ಅಮ್ಮಾ....
ಎಂದು ಗೋಳಾಡಿದ,
ಅಳ ಬ್ಯಾಡ ಮಗ, ನಿನ್ ಆ ಮಾರ್ಗವನ್ನು ಅಯ್ದುಕೊಂಡಿದಕ್ಕೆ ಆಲ್ವಾ, ನಿನ್ನ ನಾನು ನೋಡಕ್ಕೆ ಆಗಿದ್ದು, ಸಾಕು ಮಗ ಸಾಕು...
ಈ ಜನ್ಮಕ್ಕೆ ಇಷ್ಟೇ ಸಾಕು.. ಇನ್ನು ನಾನು ನೆಮ್ಮದಿಯಾಗಿ ಮುಕ್ತಿಯನ್ನು ಪಡಿತೀನಿ..
ಎನ್ನುತ್ತಾ ಹಾಗೆ ಮೇಲಕ್ಕೆ ಏರಿದ ಅವಳ ದೇಹ ಗಾಳಿಯಲ್ಲಿ ತೇಲುತ್ತಿತ್ತು,
ಅಮ್ಮಾ ಅಮ್ಮಾ ಹೋಗ್ಬೇಡ....ಅಮ್ಮಾ... ಅಮ್ಮಾ....
ಎಂದು ಕೈ ಚಾಚಿದ ಮಗನತ್ತಾ ಕೈ ಚಾಚುತ್ತಾ ಹಾಗೆ ಪೂರ್ಣಚಂದಿರ ಕಡೆಗೆ ಅವಳು ತೇಲಿ, ಬೆಳದಿಂದಲ ಜೊತೆ ಗಾಳಿಯಲ್ಲಿ ಲೀನವಾಗಿ ಬಿಟ್ಟಳು...
ನಕ್ಷತ್ರಗಳು ತುಂಬಿದ್ದ ಬಾನಿನಲ್ಲಿ ಅವಳೂ ಸಹ ಒಂದು ನಕ್ಷತ್ರವಾದಳು...
ಕೆಳಗೆ ಕುಸಿದು ಅಳುತ್ತಿದ್ದ ಪ್ರಜಿನ್ ನ ಸಮಾಧಾನ ಪಡಿಸಿ,
ಹೆಗಲನ್ನು ಹಿಡಿದುಕೊಂಡು ಅವನ ತಂದೆ ಕರ್ದೊಯ್ದರು....
ಮೂರು ದಿನಗಳ ನಂತರ ಆ ಮನೆಯನ್ನು ನೆಲಸಮ ಮಾಡಿದ ವರ್ಧಾ..
ಪ್ರಜಿನ್ ಗೆ ಮಾತ್ರವೇ ಸೇರಬೇಕಿದ್ದ ಅವನ ಆಸ್ತಿಯ ಹಣ ಬಂದು ಸೇರಿತು....
ಮುಕ್ತಾಯ...
ಧನ್ಯವಾದಗಳು ಎಲ್ಲರಿಗೂ
-ಪ್ರಕಾಶ್ ಶ್ರೀನಿವಾಸ್
ಧನ್ಯವಾದಗಳು ಎಲ್ಲರಿಗೂ
-ಪ್ರಕಾಶ್ ಶ್ರೀನಿವಾಸ್
Padma Priya
ReplyDeleteಭಯಾನಕ, ಥ್ರಿಲ್ಲರ್, ಸೆಂಟಿಮೆಂಟ್ ಎಲ್ಲವನ್ನು ಒಳಗೊಂಡ ಕಥೆ. ನಿಜಕ್ಕೂ ಬಹಳ ಅಧ್ಬುತವಾಗಿದೆ. ಎಲ್ಲಿಯೂ ನಿಲ್ಲಿಸದೆ ಓಡುವಂತ ಕಥೆ. ಎಂದಿನ ನಿಮ್ಮ ಶೈಲಿಯ ಈ ಕಥೆಯು ಸುಪರ್ಬ್. ಎಂಡಿಂಗ್ ಮಾತ್ರ ಊಹಿಸಲು ಸಾದ್ಯವಿಲ್ಲದ್ದು ಸಕ್ಕತ್ ಇದೆ ನಿಮ್ಮ ಅಭಿಮಾನಿಗಳಿಗೆ ರಸಗವಳ.....
Shwetha Hoolimath
ReplyDeleteಕಥೆ ತುಂಬಾ ಚೆನ್ನಾಗಿದೆ... ಇಲ್ಲಿಯೂ ಕೂಡ ಅನಿರೀಕ್ಷಿತ ಅಂತ್ಯ ಕಂಡಿದೆ... ಕುತೂಹಲ ಮೂಡಿಸುವ ಇಂತಹ ಕಥೆಗಳು ಮತ್ತಷ್ಟು ಬರಲಿ ಎಂದು ಆಶಿಸುತ್ತೇನೆ
ವಾವ್! ಅದ್ಭುತ ಕಥೆ! ಕಥೆ ಹೆಣೆಯುವ ತಂತ್ರ ಸೂಪರ್.. ಅದರಲ್ಲಿ ನಮಗೆ ಹಿಡಿತ ಸಿಕ್ಕಾಗಿದೆ. ಇನ್ನೂ ಅದ್ಭುತ ಕಥೆಗಳು ಹೊರ ಬರಲಿ. ನಿವು ಯಾಕೆ ಪ್ರಜೀನ ಸರಣಿ ಕಥೆಗಳನ್ನು ಮುಂದುವರಿಸಬಾರದು? ಮುಂದೆ ಹತ್ತಿಪ್ಪತ್ತು ಕಥೆಗಳಾದ ಮೇಲೆ ಯಾವುದಾದರೂ ನಿರ್ದೇಶಕರಿಗೆ ತೋರಿಸಿ. ಲಕ್ಕಿಯಾಗಿದ್ದರೆ ಧಾರಾವಾಹಿ ರೂಪದಲ್ಲಿ ಹೊರಬರಬಹುದು.
ReplyDelete